ಹೈದರಾಬಾದ್(ತೆಲಂಗಾಣ): ಆನ್ಲೈನ್ ಅಪ್ಲಿಕೇಶನ್ ಮೂಲಕ ರಾಜ್ಕುಮಾರ್ ಎಂಬಾತ ಕೇವಲ 12 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ. ತಿಂಗಳ ಬಳಿಕ ಇಎಂಐ ಮೂಲಕ 4 ಸಾವಿರ ರೂ. ಮರುಪಾವತಿ ಮಾಡಿದ್ದಾನೆ. ಇದಾದ ಬಳಿಕ ತನ್ನ ಸ್ನೇಹಿತರ ಮೊಬೈಲ್ ನಂಬರ್‌ಗಳನ್ನು ಆತ ಸಾಲ ನೀಡುವ ಆನ್ಲೈನ್ ಆ್ಯಪ್ನಲ್ಲಿ ನೀಡಿದ್ದಾನೆ.
ಆನ್ಲೈನ್ ಮೂಲಕ ಸಾಲ ನೀಡಿರುವ ಕಂಪನಿಯು ಆತನ ಸ್ನೇಹಿತರಿಗೆ 'ರಾಜ್ಕುಮಾರ್ ಇಲ್ಲಿಯವರೆಗೆ ಸಾಲ ಮರುಪಾವತಿ ಮಾಡಿಲ್ಲ' ಎಂದು ಮೇಲಿಂದ ಮೇಲೆ ಸಂದೇಶ ರವಾನಿಸಿದೆ. ಇದರಿಂದ ಅವಮಾನಕ್ಕೊಳಗಾಗಿರುವ ರಾಜ್ಕುಮಾರ್ ನಿನ್ನೆ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ರಾಜ್ಕುಮಾರ್ ಜಿಯಾಗುಡಾ ಪ್ರದೇಶದಲ್ಲಿ ವಾಸವಾಗಿದ್ದು, ಆನ್ಲೈನ್ ಮೂಲಕ ಸಾಲ ಪಡೆದುಕೊಂಡಿದ್ದನು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆರ್ಥಿಕ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮೋದಿ ವಿಫಲ: ಸುಬ್ರಮಣಿಯನ್ ಸ್ವಾಮಿ
ಘಟನೆ ಬೆನ್ನಲ್ಲೇ ಮೃತನ ತಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯ ಕಿರುಕುಳದಿಂದಾಗಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದನು.