ಲಖನೌ : ಉತ್ತರಪ್ರದೇಶ ಸರ್ಕಾರ ತನ್ನ ಪ್ರಾಂತೀಯ ರಕ್ಷಕ ದಳ ಸಿಬ್ಬಂದಿಗೆ ಕರ್ತವ್ಯ ಭತ್ಯೆಯಲ್ಲಿ 20 ರೂ. ಹೆಚ್ಚಳ ಮಾಡಿದೆ. ಪ್ರಾಂತೀಯ ರಕ್ಷಕ ದಳ (ಪಿಆರ್‌ಡಿ) ಸಿಬ್ಬಂದಿ ತಮ್ಮ ಸೇವೆಯನ್ನು ಖಾಯಂಗೊಳಿಸುವುದರ ಜೊತೆಗೆ 'ಸಮಾನ ಕೆಲಸಕ್ಕೆ ಸಮಾನ ವೇತನ' ಎಂದು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕನಿಷ್ಠ 12,000 ಪಿಡಿಆರ್ ಸಿಬ್ಬಂದಿಯನ್ನು ರಾಜ್ಯದಾದ್ಯಂತ ಸಂಚಾರ, ಪೊಲೀಸ್ ಠಾಣೆಗಳು ಮತ್ತು ಇತರ ಕರ್ತವ್ಯಗಳಲ್ಲಿ ನಿಯೋಜಿಸಲಾಗಿದೆ. ತಮ್ಮ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.
ಗೃಹರಕ್ಷಕ ದಳದ ಜವಾನರಿಗೆ ಸರಿಸಮನಾಗಿ ಕರ್ತವ್ಯ ಭತ್ಯೆ ಕೇಳುತ್ತಿದ್ದು, ಗೃಹರಕ್ಷಕ ದಳ ಸಿಬ್ಬಂದಿ ದಿನಕ್ಕೆ 700 ರೂ. ಕರ್ತವ್ಯ ಭತ್ಯೆ ಪಡೆಯುತ್ತಿದ್ದಾರೆ.
ಪಿಆರ್‌ಡಿ ಸಿಬ್ಬಂದಿಯನ್ನು ಟ್ರಾಫಿಕ್ ಬೀಟ್, ಪೊಲೀಸ್ ಠಾಣೆ ಮತ್ತು ಇತರ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಆದರೆ, ಅವರ ಕರ್ತವ್ಯ ಭತ್ಯೆ ಹೋಮ್ ಗಾರ್ಡ್ ಜವಾನರ ಕನಿಷ್ಠ ಅರ್ಧದಷ್ಟು ಇಲ್ಲ ಎಂದು ತಿಳಿದು ಬಂದಿದೆ.
ಈ ಸಂಬಂಧ ಮಾತನಾಡಿರುವ ಯುವ ಕಲ್ಯಾಣ ಇಲಾಖೆ ವಿಶೇಷ ಕಾರ್ಯದರ್ಶಿ ಆನಂದಕುಮಾರ್ ಸಿಂಗ್, ರಾಜ್ಯಪಾಲರ ಒಪ್ಪಿಗೆ ಬಳಿಕ ಪಿಆರ್‌ಡಿ ಪಡೆಗೆ ಕರ್ತವ್ಯ ಭತ್ಯೆ ಹೆಚ್ಚಿಸಲಾಗಿದೆ ಎಂದಿದ್ದಾರೆ. ಆದರೆ, ಕೇವಲ 20 ರೂ. ಹೆಚ್ಚಳ ಮಾಡಿದ ಹಿನ್ನೆಲೆ ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಳ್ಳತನ ತಡೆಗೆ ಜಿಎಸ್‌ಎಂ ಸಿಸ್ಟಮ್ ಪರಿಚಯಿಸಿದ ಕುಷ್ಟಗಿ ಪೊಲೀಸರು
ಪಿಆರ್‌ಡಿ ಯೂನಿಯನ್‌ನ ಉಪಾಧ್ಯಕ್ಷ ಅಜಯ್‌ಸಿಂಗ್ ಮಾತನಾಡಿ, ಕಲ್ಯಾಣ ಕ್ರಮಗಳನ್ನು ಕೈಗೊಂಡಿರುವ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಆದರೆ, ಪಿಆರ್‌ಡಿ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸುವುದು ನಮ್ಮ ಬಹುಕಾಲದ ಬೇಡಿಕೆಯಾಗಿದೆ. ಗೃಹರಕ್ಷಕ ಸಿಬ್ಬಂದಿಗೆ ಸರಿಸಮಾನವಾಗಿ ನಮ್ಮ ಸಿಬ್ಬಂದಿಗೆ ಕರ್ತವ್ಯ ಭತ್ಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.