ಲಖನೌ(ಉತ್ತರ ಪ್ರದೇಶ): 'ಪಠಾಣ್' ಸಿನಿಮಾ ವಿವಾದ ದಿನೇ ದಿನೇ ಕಾವೇರುತ್ತಿದ್ದು, ಇದೀಗ ಶಾರುಖ್ ಖಾನ್ ಅವರು ದೀಪಿಕಾ ಪಡುಕೋಣೆ ಅವರನ್ನು ತಬ್ಬಿಕೊಂಡಿರುವ ಪೋಸ್ಟರ್ ಒಂದರಲ್ಲಿ ದೀಪಿಕಾ ಪಡುಕೋಣೆ ಬದಲಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾರ್ಫ್ ಮಾಡಿದ ಚಿತ್ರ ಹಂಚಿಕೊಂಡಿದ್ದಕ್ಕಾಗಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಯುಪಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರದ ಪೋಸ್ಟರ್‌ಗಳಲ್ಲಿ ಸಿಎಂ ಯೋಗಿ ಅವರ ಫೋಟೋ ಹಾಕಿದ್ದಕ್ಕಾಗಿ ಹೆಡ್ ಕಾನ್‌ಸ್ಟೇಬಲ್ ನೀಡಿದ ದೂರು ಆಧರಿಸಿ ಲಖನೌನ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಡಿಜಿಪಿ ಕೇಂದ್ರ ಕಚೇರಿಯ ಸೈಬರ್ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ.
ಇತ್ತೀಚೆಗಷ್ಟೇ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ‘ಬೇಷರಂ ರಂಗ್’ ಹಾಡು ಬಿಡುಗಡೆಯಾಗಿದ್ದು, ಹಾಡು ಬಿಡುಗಡೆಯ ಬೆನ್ನಲ್ಲೇ ವಿವಾದಕ್ಕೆ ಸಿಲುಕಿಕೊಂಡಿದೆ. ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಟ್ ಅಭಿಯಾನ ಪ್ರಾರಂಭವಾಗಿತ್ತು. ಇದಕ್ಕೆ ಕೆಲ ರಾಜಕೀಯ ಮುಖಂಡರು ಕೂಡ ಹಾಡನ್ನು ನಿಷೇಧಿಸುವಂತೆ ಒತ್ತಾಯಿಸಿದರು.
ಇದನ್ನೂ ಓದಿ: 'little unwell'..ಪಠಾಣ್ ಬಾಯ್ಕಾಟ್ ಬಿಸಿ-ಅಭಿಮಾನಿಗಳ ಚಿಂತೆಗೆ ಕಾರಣವಾಯ್ತು ಶಾರುಖ್ ಹೇಳಿಕೆ