ಯಮುನಾನಗರ (ಹರಿಯಾಣ): ಗಂಡ ಹಾಗೂ ಆತನ ಇಬ್ಬರು ಸಹೋದರರು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆಂದು ವಿವಾಹಿತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಆತನ ಇಬ್ಬರು ಸಹೋದರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹರಿಯಾಣದ ಯಮುನಾನಗರದಲ್ಲಿ ಈ ಘಟನೆ ನಡೆದಿದೆ. 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಮಹಿಳೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮದುವೆಯಾದ ಹೊಸದರಲ್ಲಿ ಎಲ್ಲವೂ ಸರಿಯಾಗಿತ್ತು. ಇದಾದ ಕೆಲವು ತಿಂಗಳ ಬಳಿಕ ಹೆಂಡ್ತಿಗೆ ಕಿರುಕುಳ ನೀಡಲು ಶುರು ಮಾಡಿರುವ ಗಂಡ, ಸಣ್ಣಪುಟ್ಟ ವಿಚಾರಕ್ಕೂ ಜಗಳ ಮಾಡಲು ಶುರು ಮಾಡಿದ್ದಾನೆ. ಜತೆಗೆ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಪೀಡಿಸಲು ಆರಂಭಿಸಿದ್ದಾನೆ.
ಗಂಡನ ಮಾತು ಕೇಳದ ಹೆಂಡ್ತಿಗೆ ತನ್ನಿಬ್ಬರು ಸಹೋದರರು ಚಿತ್ರಹಿಂಸೆ ನೀಡುವಂತೆ ಸೂಚಿಸಿದ್ದಾನೆ. ಇದರ ಬೆನ್ನಲ್ಲೇ ಮಹಿಳೆ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಕೆಲ ತಿಂಗಳ ಕಾಲ ಪೋಷಕರ ಮನೆಯಲ್ಲಿ ಉಳಿದುಕೊಂಡ ಸಂತ್ರಸ್ತ ಮಹಿಳೆ ವಾಪಸ್ ಆಗಿದ್ದಾರೆ. ಈ ವೇಳೆ ಮತ್ತೆ ಮತ್ತೆ ಕಿರುಕುಳ ನೀಡಲು ಶುರುವಿಟ್ಟುಕೊಂಡಿದ್ದಾನೆ. ಜತೆಗೆ ತನ್ನ ಸಹೋದರರಿಗೂ ಹೆಂಡ್ತಿಯಾಗಿರುವಂತೆ ತಿಳಿಸಿದ್ದಾನೆ. ಇದಕ್ಕೆ ನಿರಾಕರಣೆ ಮಾಡುತ್ತಿದ್ದಂತೆ ಕಳೆದ ಕೆಲ ದಿನಗಳ ಹಿಂದೆ ಮನೆಯಲ್ಲಿ ಕೂಡಿ ಹಾಕಿರುವ ಮೂವರು, ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಅಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ: ನೀರು ತುಂಬಿದ ರಸ್ತೆಯಲ್ಲಿಯೇ ನಡೆದು ಬನ್ನಿ... ಬಿಜೆಪಿ ಶಾಸಕನಿಗೆ ಗ್ರಾಮಸ್ಥರಿಂದ ಶಿಕ್ಷೆ
ಸುಮಾರು 18 ದಿನಗಳ ಕಾಲ ದುಷ್ಕೃತ್ಯ ಎಸಗಿರುವ ಕಾಮುಕರು, ಚಿತ್ರಹಿಂಸೆ ನೀಡಿದ್ದಾರೆ. ಈ ವೇಳೆ ಕಾಮುಕರಿಂದ ತಪ್ಪಿಸಿಕೊಂಡಿರುವ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.