ನವದೆಹಲಿ : ಲೈಂಗಿಂಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಕುಸ್ತಿಪಟುಗಳು ನೀಡಿರುವ ದೂರಿನ ಮೇರೆಗೆ ನಿರ್ಗಮಿತ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಗುರುವಾರ (ಇಂದು) ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ನೀಡಿದ ಭರವಸೆಯಂತೆ ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ.
ಠಾಕೂರ್ ಅವರು ಜೂನ್ 7 ರಂದು ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಅವರನ್ನು ಭೇಟಿ ಮಾಡಿ ಸಭೆ ನಡೆಸಿದ್ದರು. ಈ ವೇಳೆ ಲೈಂಗಿಕ ಕಿರುಕುಳ ಪ್ರಕರಣದ ಚಾರ್ಜ್ ಶೀಟ್ ಅನ್ನು ಜೂನ್ 15 ರೊಳಗೆ ಸಲ್ಲಿಸಲಾಗುವುದು ಎಂದು ಪ್ರತಿಭಟನಾನಿರತ ಹೋರಾಟಗಾರರಿಗೆ ಭರವಸೆ ನೀಡಿದ್ದರು. ಕ್ರೀಡಾ ಸಚಿವರು ಸುದೀರ್ಘ ಚರ್ಚೆ ನಡೆಸಿದ ಬಳಿಕ ಕುಸ್ತಿಪಟುಗಳು ಜೂನ್ 15 ರ ತನಕ ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದರು.
"ಜೂನ್ 15 (ಗುರುವಾರ) ದೊಳಗೆ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಸಚಿವರು ಕುಸ್ತಿಪಟುಗಳಿಗೆ ಭರವಸೆ ನೀಡಿರುವುದರಿಂದ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪಂಜಾಬ್ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಕುಸ್ತಿಪಟು ವಿನೇಶ್ ಫೋಗಟ್
ಮೂಲಕಗಳ ಪ್ರಕಾರ, ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ವಿಚಾರಣೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡವು ( ಎಸ್‌ಐಟಿ ) ಇದುವರೆಗೆ 180 ಕ್ಕೂ ಹೆಚ್ಚು ಜನರನ್ನು ವಿಚಾರಿಸಿದೆ. ಗೊಂಡಾದಲ್ಲಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರ ನಿವಾಸಕ್ಕೆ ಸಹ ಎಸ್‌ಐಟಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಜೊತೆಗೆ, ಸಂಸದರ ಸಂಬಂಧಿಕರು, ಸಹೋದ್ಯೋಗಿಗಳು, ಸಹಾಯಕರು ಮತ್ತು ಅವರ ಸಹಚರರಿಂದ ಸಹ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ : Wrestlers Protest : ಬ್ರಿಜ್ ಭೂಷಣ್ ಪ್ರಕರಣದಲ್ಲಿ ಮೂರು ರಾಷ್ಟ್ರಗಳಿಂದ ಸಿಸಿಟಿವಿ ದೃಶ್ಯಾವಳಿ ಕೇಳಿದ ದೆಹಲಿ ಪೊಲೀಸರು
ಚಾರ್ಜ್‌ಶೀಟ್ ಸಲ್ಲಿಸದಿದ್ದರೆ ಪ್ರತಿಭಟನೆ ಪುನಾರಂಭ : ಕುಸ್ತಿಪಟುಗಳೊಂದಿಗಿನ ಠಾಕೂರ್ ಸಭೆಯ ನಂತರ ಪ್ರಕರಣದ ಚಾರ್ಜ್ ಶೀಟ್ ಅನ್ನು ಜೂನ್ 15 ರೊಳಗೆ ಸಲ್ಲಿಸಬೇಕು ಮತ್ತು ಜೂನ್ 30 ರೊಳಗೆ WFI ಉನ್ನತ ಹುದ್ದೆಗೆ ಚುನಾವಣೆ ನಡೆಸಬೇಕು ಎಂದು ಪ್ರತಿಭನಾಕಾರರು ಒತ್ತಾಯಿಸಿದ್ದರು. ತಾವು ಒಪ್ಪಿಕೊಂಡಿರುವ ನಿರ್ದಿಷ್ಟ ಸಮಯದೊಳಗೆ ಆರೋಪಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸದಿದ್ದರೆ ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಲು ಹಿಂಜರಿಯುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ : ನೂತನ ಸಂಸತ್ ಭವನದತ್ತ ಹೊರಟ ಕುಸ್ತಿಪಟುಗಳ ಬಂಧನ : ಪೊಲೀಸರಿಂದ ಪ್ರತಿಭಟನಾ ಸ್ಥಳ ತೆರವು