ಹೈದರಾಬಾದ್: ರಕ್ಷಾಬಂಧನವು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಸಹೋದರಿಯರು ತಮ್ಮ ಅಣ್ಣ-ತಮ್ಮಂದಿರಿಗೆ ರಾಖಿಗಳನ್ನು ಕಟ್ಟಿ ತಮ್ಮ ನಡುವಿನ ಪ್ರೀತಿ, ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾರೆ. ಈ ಬಾರಿಯ ರಕ್ಷಾಬಂಧನ ವಿಶೇಷವಾಗಿರಲಿದೆ. ಇದಕ್ಕೆ ಕಾರಣ ವಿಶ್ವದಲ್ಲೇ ಅತಿ ದೊಡ್ಡ ಮತ್ತು ಚಿಕ್ಕ ರಾಖಿಗಳು ಹಬ್ಬದ ಮೆರುಗು ಹೆಚ್ಚಿಸಿವೆ.
ಅತಿದೊಡ್ಡ ರಾಖಿ: ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಅಶೋಕ್ ಭಾರದ್ವಾಜ್ ಎನ್ನುವವರು 1000 ಅಡಿ ಉದ್ದ ಮತ್ತು 25 ಅಡಿ ಅಗಲದ ರಾಖಿಯನ್ನು ಮಧ್ಯಪ್ರದೇಶದ ಭಿಂಡು ಜಿಲ್ಲೆಯಲ್ಲಿ ನಿರ್ಮಿಸಿದ್ದಾರೆ. ಈ ರಾಖಿಯನ್ನು ಫೋಮ್, ಬಟ್ಟೆ, ಮರದ ಹಲಗೆಗಳು ಮತ್ತು ಇತರ ವಸ್ತುಗಳಿಂದ ಮಾಡಲಾಗಿದೆ. ರಾಖಿಯ ಹೊರಗಿನ ವೃತ್ತದ ವ್ಯಾಸ 25 ಅಡಿ ಇದ್ದು ಮುಂದಿನ ವೃತ್ತದ ವ್ಯಾಸ 15 ಅಡಿಗಳು ಮತ್ತು 10 ಅಡಿಯಷ್ಟಿದೆ. ವಿವಿಧ ರಾಜ್ಯಗಳ 10ಕ್ಕೂ ಹೆಚ್ಚು ಕುಶಲಕರ್ಮಿಗಳು ಸೇರಿ ನಿರ್ಮಾಣ ಮಾಡಿರುವ ರಾಖಿ ಆಗಸ್ಟ್ 31ರಂದು ಗಿನ್ನೆಸ್, ಒಎಂಜಿ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಲಿದ್ದು ವಿಶ್ವದ ದೊಡ್ಡ ರಾಖಿಯಾಗಲಿದೆ. ಅಲ್ಲದೇ ಇದನ್ನು ರಕ್ಷಾಬಂಧನದಿಂದ ಕೃಷ್ಟ ಜನ್ಮಾಷ್ಟಮಿಯವರೆಗೆ ಪ್ರದರ್ಶನಕ್ಕಿಡಲಾಗುತ್ತದೆ.

ವಿಶ್ವದ ಅತ್ಯಂತ ಚಿಕ್ಕ ರಾಖಿ: ವಿಶ್ವದ ಅತ್ಯಂತ ಚಿಕ್ಕ ಚಿನ್ನದ ರಾಖಿಯನ್ನು ಉದಯಪುರದಲ್ಲಿ ನಿರ್ಮಿಸಲಾಗಿದೆ. ಇಕ್ಬಾಲ್ ಸಕ್ಕಾ ಎಂಬವರು ಇದನ್ನು ತಯಾರಿಸಿದ್ದಾರೆ. ಹಬ್ಬದ ಸಾರ ಒಳಗೊಂಡಿರುವ ಇದು ಕೇವಲ ಒಂದು ಮಿಲಿಮೀಟರ್ ಇದೆ. ಭೂತಗನ್ನಡಿಯ ಮೂಲಕ ಗಮನಿಸಿದರೆ ರಾಖಿ ಮತ್ತು ಅದರಲ್ಲಿನ ಬರಹಗಳು ಗೋಚರವಾಗುತ್ತವೆ. ಸಕ್ಕಾ ಅವರು ಅತ್ಯಂತ ಚಿಕ್ಕ ವಸ್ತುಗಳನ್ನು ತಯಾರಿಸುವುದರಲ್ಲಿ ನಿಪುಣರಾಗಿದ್ದು, ಈಗಾಗಲೇ 100ಕ್ಕೂ ಹೆಚ್ಚು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಕೆಲ ದಿನಗಳ ಹಿಂದೆ 24 ಕ್ಯಾರೆಟ್ ಚಿನ್ನದಿಂದ ಚಿಕ್ಕದಾದ ಕೈ ಚೀಲವನ್ನು ಇವರು ತಯಾರಿಸಿದ್ದರು.
ಸ್ವಾತಂತ್ರ್ಯೋತ್ಸವದಂದು 0.5 ಮಿ.ಮೀಟರ್ನ ತ್ರಿವರ್ಣ ಧ್ವಜವನ್ನೂ ತಯಾರಿಸಿದ್ದರು. ಅತ್ಯಂತ ಚಿಕ್ಕದಾದ ಚಿನ್ನದ ಸರ ತಯಾರಿಸುವ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಡ್ ರೆಕಾರ್ಡ್ನಲ್ಲಿ ತಮ್ಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈವರೆಗೂ ಇವರ ಹೆಸರಲ್ಲಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಯೂನಿಕ್ ವರ್ಲ್ಡ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಅಮೇಜಿಂಗ್ ವರ್ಲ್ಡ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಗಳು ದಾಖಲಾಗಿವೆ.

ಅತ್ಯಂತ ತೂಕದ ರಾಖಿ: ರಕ್ಷಾ ಬಂಧನಕ್ಕೆ ಅತ್ಯಂತ ಭಾರದ ರಾಖಿಯನ್ನೂ ನಿರ್ಮಿಸಲಾಗಿದೆ. ಇಂದೋರ್‌ನಲ್ಲಿ ಸರಿಸುಮಾರು 1 ಕ್ವಿಂಟಲ್ ತೂಕದ ಪಂಚಲೋಹದ ರಾಖಿ ನಿರ್ಮಿಸಲಾಗಿದೆ.
ಇದನ್ನೂ ಓದಿ: Raksha bandhan: ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಸಹೋದರಿಯರಿಗೆ ನೀಡಬಹುದಾದ ಅದ್ಭುತ ಉಡುಗೊರೆಗಳು ಇಲ್ಲಿವೆ ನೋಡಿ