ಹೈದರಾಬಾದ್: ವಿಶ್ವಾದ್ಯಂತ 100 ಅತ್ಯಂತ ಪ್ರಭಾವಿ ಮಹಿಳೆಯರ ವಾರ್ಷಿಕ ಶ್ರೇಯಾಂಕವನ್ನು ಫೋರ್ಬ್ಸ್ ಇಂದು ಬಿಡುಗಡೆ ಮಾಡಿದೆ. ಇದರಲ್ಲಿ ನಾಲ್ವರು ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 32ನೇ ಸ್ಥಾನ ಗಳಿಸಿದ್ದು, ಉದಾರದಾನಿ (Philanthropist) ರೋಶನಿ ನಾಡರ್ ಮಲ್ಹೋತ್ರಾ, ಭಾರತೀಯ ಸ್ಟೀಲ್ ಪ್ರಾಧಿಕಾರದ ಅಧ್ಯಕ್ಷೆ ಸೋಮಾ ಮೊಂಡಲ್ ಮತ್ತು ಬಿಲಿಯನೇರ್ ಉದ್ಯಮಿ ಕಿರಣ್ ಮಜುಂದಾರ್ ಶಾ ಈ ಪಟ್ಟಿಯಲ್ಲಿದ್ದಾರೆ.
ಫೋರ್ಬ್ಸ್ ಪ್ರಭಾವಿ ಮಹಿಳೆಯರ 20ನೇ ಆವೃತ್ತಿಯಲ್ಲಿ ದೊಡ್ಡ ಕಂಪನಿಗಳ ಸಿಇಒಗಳು ಮತ್ತು ಖ್ಯಾತ ನಟಿಯರಿಂದ ಹಿಡಿದು ರಾಜಕಾರಣಿಗಳು ಮತ್ತು ಉದಾರದಾನಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸ್ಥಾನ ಸಿಕ್ಕಿದೆ. ಇದು 2023ನೇ ಸಾಲಿನಲ್ಲಿ ಅವರ ಮಹತ್ವ ಹಾಗೂ ಪ್ರಭಾವವನ್ನು ಗುರುತಿಸುತ್ತದೆ. ಭಾರತೀಯ ಮಹಿಳೆಯರಲ್ಲಿ ನಿರ್ಮಲಾ ಸೀತಾರಾಮನ್ ಅಗ್ರಸ್ಥಾನ ಹೊಂದಿದ್ದಾರೆ. ಇದರೊಂದಿಗೆ ಅವರು ಕಳೆದ ವರ್ಷದ 36ನೇ ಸ್ಥಾನದಿಂದ 32ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅಷ್ಟೇ ಅಲ್ಲ, ಸತತ ಐದನೇ ವರ್ಷವೂ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಖ್ಯಾತಿಗೂ ಪಾತ್ರರಾಗಿದ್ದಾರೆ.
ನಿರ್ಮಲಾ ಅವರ ನಂತರ ರೋಶನಿ ನಾಡರ್ ಮಲ್ಹೋತ್ರಾ ಸ್ಥಾನ ಗಳಿಸಿದ್ದಾರೆ. ಲಿಸ್ಟೆಡ್ ಐಟಿ ಕಂಪನಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯ ಮಲ್ಹೋತ್ರಾ 60ನೇ ಸ್ಥಾನ ಪಡೆದಿದ್ದಾರೆ. ಭಾರತೀಯ ಸ್ಟೀಲ್ ಪ್ರಾಧಿಕಾರದ ಅಧ್ಯಕ್ಷರಾದ ಸೋಮಾ ಮೊಂಡಲ್ 70ನೇ ಹಾಗೂ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ 76ನೇ ಸ್ಥಾನ ಗಳಿಸಿದ್ದಾರೆ.
ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಎರಡನೇ ವರ್ಷವೂ ಅತ್ಯಂತ ಸ್ಪೂರ್ತಿದಾಯಕ ಮಹಿಳೆಯಾಗಿ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಫ್ರಾನ್ಸ್ ರಾಜಕಾರಣಿ ಕ್ರಿಸ್ಟಿನ್ ಲಗಾರ್ಡೆ ಮತ್ತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಮಾಧ್ಯಮ ಮತ್ತು ಮನರಂಜನಾ ವಿಭಾಗದಲ್ಲಿ ಅಮೆರಿಕನ್ ಗಾಯಕಿ-ಗೀತರಚನೆಗಾರ್ತಿ ಟೇಲರ್ ಸ್ವಿಫ್ಟ್ ಐದನೇ ಸ್ಥಾನವನ್ನು ಗಳಿಸುವ ಮೂಲಕ ಜಾಗತಿಕವಾಗಿ ಅಗ್ರ ಐವರು ಪ್ರಭಾವಿಗಳಲ್ಲಿ ಒಬ್ಬರು. ಅಲ್ಲದೇ, ಮನರಂಜನಾ ವಿಭಾಗದಲ್ಲಿ ಈ ಉನ್ನತ ಸ್ಥಾನವನ್ನು ಗಳಿಸಿದ ಮೊದಲ ಮಹಿಳೆ ಎಂಬ ಇತಿಹಾಸವನ್ನೂ ಸೃಷ್ಟಿಸಿದ್ದಾರೆ. 2023ರಲ್ಲಿ 1.1 ಶತಕೋಟಿ ಡಾಲರ್ಗಿಂತ ಹೆಚ್ಚಿನ ನಿವ್ವಳ ಮೌಲ್ಯದೊಂದಿಗೆ ಬಿಲಿಯನೇರ್ಸ್ ಕ್ಲಬ್‌ಗೆ ಸೇರಿ ಸ್ವಿಫ್ಟ್, ಇಲ್ಲಿಯೂ ಅಗ್ರಸ್ಥಾನ ಹೊಂದಿದ್ದಾರೆ.
ಇದನ್ನೂ ಓದಿ: ಫೋರ್ಬ್ಸ್ ಅಮೆರಿಕ ಸಿರಿವಂತರ ಪಟ್ಟಿ: ಅಗ್ರಸ್ಥಾನದಲ್ಲಿ ಮಸ್ಕ್, 2ನೇ ಸ್ಥಾನದಲ್ಲಿ ಬೆಜೋಸ್