2008ರಿಂದ ಮೇ 25ರಂದು ಪ್ರತಿ ವರ್ಷ ವಿಶ್ವ ಥೈರಾಯ್ಡ್ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಅಮೆರಿಕನ್ ಥೈರಾಯ್ಡ್ ಅಸೋಸಿಯೇಷನ್ ಮತ್ತು ಯುರೋಪಿಯನ್ ಥೈರಾಯ್ಡ್ ಅಸೋಸಿಯೇಷನ್ ಸ್ಥಾಪಿಸಿತು. ನಂತರ, ಹೆಚ್ಚಿನ ಸಂಸ್ಥೆಗಳು ಸೇರಿಕೊಂಡವು. ಥೈರಾಯ್ಡ್ ಮತ್ತು ರೋಗದ ಚಿಕಿತ್ಸೆಗಾಗಿ ವರ್ಷಗಳಲ್ಲಿ ಮಾಡಿದ ವೈದ್ಯಕೀಯ ಪ್ರಗತಿಯ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ.
ಬೆಂಗಳೂರಿನ ಕೋರಮಂಗಲದ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ಆಹಾರ ತಜ್ಞ ಡಾ.ಶರಣ್ಯ ಶ್ರೀನಿವಾಸ್ ಶಾಸ್ತ್ರಿ ಈ ಬಗ್ಗೆ 'ಈಟಿವಿ ಭಾರತ ಸುಖೀಭವ' ತಂಡದೊಂದಿಗೆ ಮಾತನಾಡಿದ್ದಾರೆ. “ನಿಮ್ಮ ಥೈರಾಯ್ಡ್ ಹಾರ್ಮೋನ್ ಸ್ಥಿತಿಯು ನಿಮ್ಮ ದೇಹದ ತೂಕ ಮತ್ತು ಶಕ್ತಿಯೊಂದಿಗೆ ಸಂಬಂಧ ಹೊಂದಿದೆ ಎಂಬುದು ದೃಢಪಟ್ಟಿದೆ. ಈ ಕಾರ್ಯವಿಧಾನದಲ್ಲಿನ ವಿರೂಪಗಳು ಹೈಪರ್ ಥೈರಾಯ್ಡಿಸಮ್, ಹೈಪೋಥೈರಾಯ್ಡಿಸಮ್ ಮತ್ತು ಥೈರಾಯ್ಡಿಟಿಸ್ನಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಅಲ್ಲಿ ಕೂದಲು ಉದುರುವುದು, ಮಲಬದ್ಧತೆ, ತೂಕ ಹೆಚ್ಚಾಗುವುದು, ತೂಕ ನಷ್ಟ, ಅನಿಯಮಿತ ಮುಟ್ಟಿನ ಚಕ್ರಗಳು, ಆಯಾಸ, ಜಡತ್ವ ಮುಂತಾದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು” ಎಂದು ಹೇಳಿದ್ದಾರೆ.
ಥೈರಾಯ್ಡ್ ಹಾರ್ಮೋನ್ ಉತ್ಪಾದಿಸುವ ಗ್ರಂಥಿಯಾಗಿದ್ದು, ಇದು ದೇಹದ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ಗ್ರಂಥಿಯು ಸಣ್ಣ ಚಿಟ್ಟೆ ಆಕಾರದ ಎಂಡೋಕ್ರೈನ್ ಗ್ರಂಥಿಯಾಗಿದ್ದು, ಇದು ಕತ್ತಿನ ಕೆಳಗಿನ ಮುಂಭಾಗದಲ್ಲಿದೆ. ಹಾರ್ಮೋನುಗಳು ಹೆಚ್ಚು ಅಥವಾ ಕಡಿಮೆ ಇರುವುದನ್ನು ಅವಲಂಬಿಸಿ, ಕ್ರಮವಾಗಿ ಹೈಪರ್ ಥೈರಾಯ್ಡಿಸಮ್ ಮತ್ತು ಹೈಪೋಥೈರಾಯ್ಡಿಸಮ್ ಸಂಭವಿಸಬಹುದು.
1. ಹೈಪರ್ ಥೈರಾಯ್ಡಿಸಮ್ ಲಕ್ಷಣಗಳು: ಆತಂಕ, ಹೃದಯ ಬಡಿತ ಹೆಚ್ಚಳ, ಚಡಪಡಿಕೆ, ಕಿರಿಕಿರಿ, ಅತಿಯಾಗಿ ಬೆವರುವುದು, ತೆಳ್ಳನೆಯ ಚರ್ಮ, ತೂಕ ನಷ್ಟ, ದೌರ್ಬಲ್ಯ. ಇನ್ನು ಹೈಪರ್ ಥೈರಾಯ್ಡಿಸಮ್ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಗಳು ಇಂತಿವೆ.
- ಗ್ರೇವ್ಸ್ ಕಾಯಿಲೆ- ಅತಿಯಾದ ಥೈರಾಯ್ಡ್ ಗ್ರಂಥಿ, ಹಲವಾರು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ
- ಥೈರಾಯ್ಡ್ ಗಂಟುಗಳು- ಗಂಟುಗಳು ಥೈರಾಯ್ಡ್‌ನೊಳಗೆ ಅತಿಯಾಗಿ ಕಾರ್ಯನಿರ್ವಹಿಸುತ್ತವೆ
- ಥೈರಾಯ್ಡಿಟಿಸ್- ಥೈರಾಯ್ಡ್ ಗ್ರಂಥಿಯ ಉರಿಯೂತ
- ಅತಿಯಾದ ಅಯೋಡಿನ್
2. ಹೈಪೋಥೈರಾಯ್ಡಿಸಮ್ ಲಕ್ಷಣಗಳು: ಆಯಾಸ, ಒಣ ಕೂದಲು ಮತ್ತು ಚರ್ಮ, ದೌರ್ಬಲ್ಯ, ತೂಕ ಹೆಚ್ಚಾಗುವುದು, ನಿಧಾನ ಹೃದಯ ಬಡಿತ, ಮಲಬದ್ಧತೆ, ಖಿನ್ನತೆ, ಶೀತ. ಹೈಪೋಥೈರಾಯ್ಡಿಸಮ್ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಗಳು ಹೀಗಿವೆ:
- ಥೈರಾಯ್ಡಿಟಿಸ್- ಥೈರಾಯ್ಡ್ ಗ್ರಂಥಿಯ ಉರಿಯೂತ
- ಹಶಿಮೊಟೊ ಥೈರಾಯ್ಡಿಟಿಸ್- ಸ್ವಯಂ ನಿರೋಧಕ ಸ್ಥಿತಿ
- ಪ್ರಸವಾ ನಂತರದ ಥೈರಾಯ್ಡಿಟಿಸ್- ಹೆರಿಗೆಯ ನಂತರ ಮಹಿಳೆಯರಲ್ಲಿ ಒಂದು ಸ್ಥಿತಿ, ಇದು ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತದೆ
- ಅಯೋಡಿನ್ ಕೊರತೆ
- ಕಾರ್ಯನಿರ್ವಹಿಸದ ಥೈರಾಯ್ಡ್ ಗ್ರಂಥಿ
COVID-19 ಸಮಯದಲ್ಲಿ ಥೈರಾಯ್ಡ್ ನಿರ್ವಹಣೆ : ಕೆಲವು ಯೋಗ ಮತ್ತು ಧ್ಯಾನದೊಂದಿಗೆ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಹೊರಗಿನ ಪ್ರಪಂಚದ ಎಲ್ಲಾ ಅವ್ಯವಸ್ಥೆ ಮತ್ತು ನಕಾರಾತ್ಮಕತೆಯಿಂದ ದೂರವಿರಿ. ಆರೋಗ್ಯಕರ ಆಹಾರವನ್ನು ತಿನ್ನುವ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ ಮತ್ತು ನೀವು ಮನೆಯಲ್ಲಿಯೇ ಇರುವಾಗ ಅತಿಯಾಗಿ ತಿನ್ನಬೇಡಿ.
ನಿಯಮಿತವಾಗಿ ಔಷಧಗಳನ್ನ ತೆಗೆದುಕೊಳ್ಳಿ: ನಿಮ್ಮ ಔಷಧಗಳನ್ನು ವಿಳಂಬ ಮಾಡದೆ ನಿಯಮಿತವಾಗಿ ತೆಗೆದುಕೊಳ್ಳಿ. ಆಲ್ಕೋಹಾಲ್ ಸೇವನೆ ಮಾಡಲೇಬೇಡಿ. ಏಕೆಂದರೆ ಇದು ಥೈರಾಯ್ಡ್ ಮತ್ತು ಅದರ ಔಷಧಿಗಳ ಕಾರ್ಯಗಳಿಗೆ ಅಡ್ಡಿಯಾಗಬಹುದು.
ಸರಿಯಾಗಿ ನಿದ್ರೆ ಮಾಡಿ, ಥೈರಾಯ್ಡ್ನ ಕೆಲವು ಲಕ್ಷಣಗಳು ಆಯಾಸ, ದಣಿವು ಮತ್ತು ದೌರ್ಬಲ್ಯವನ್ನು ಒಳಗೊಂಡಿವೆ. ಆದ್ದರಿಂದ, ಸರಿಯಾದ ವಿಶ್ರಾಂತಿ ಸಹ ಮುಖ್ಯವಾಗಿದೆ. ದಿನಕ್ಕೆ ಕನಿಷ್ಠ 7-9 ಗಂಟೆಗಳ ಕಾಲ ನಿದ್ರೆ ಒಳ್ಳೆಯದು.
ಪ್ರತಿದಿನ ವ್ಯಾಯಾಮ ಮಾಡಿ: ಇದರಿಂದ ಆರೋಗ್ಯಕರ ಮನಸ್ಸಿನ ಜೊತೆಗೆ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವ್ಯಾಕ್ಸಿನೇಷನ್ ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ನಿಮ್ಮ ವೈದ್ಯರೊಂದಿಗೆ ಮಾತನಾಡಿ. COVID-19 ನ ಯಾವುದೇ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ವೈದ್ಯಕೀಯ ಸಹಾಯ ಪಡೆಯಲು ವಿಳಂಬ ಮಾಡಬೇಡಿ ಮತ್ತು ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಿ.
ಆಹಾರ ಪದ್ಧತಿ: "ಸಾಕಷ್ಟು ವ್ಯಾಯಾಮ ಮತ್ತು ನಿಯಮಿತ ಔಷಧಿಗಳೊಂದಿಗೆ ಅಯೋಡಿನ್ ಮತ್ತು ಅಗತ್ಯವಾದ ಅಮೈನೋ ಆಮ್ಲಗಳನ್ನು (ಸರಿಯಾದ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್) ಒಳಗೊಂಡಿರುವ ಸಮತೋಲಿತ ಆಹಾರವು ನಿಮಗೆ ಆರೋಗ್ಯಕರ. ಇದು ಒತ್ತಡ ರಹಿತ ಥೈರಾಯ್ಡ್ ಇರುವುದನ್ನು ಖಚಿತಪಡಿಸುತ್ತದೆ.
ಥೈರಾಯ್ಡ್ ಸಮಸ್ಯೆಗಳಿಗೆ ಸೇವಿಸಬಹುದಾದ ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ:
- ಕೇಸರಿ
- ಬಾಳೆಹಣ್ಣು
- ಹುರುಳಿ ಕಾಳು
- ಮೀನು
- ಖಿಚ್ಡಿ / ಪೊಂಗಲ್
- ಸಮ್ / ದಾಲ್
ಈ ಎಲ್ಲಾ ಆಹಾರಗಳನ್ನು ಪರಿಗಣಿಸಬಹುದಾದರೂ, ನಿಮ್ಮ ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡಲು ಹೆಚ್ಚು ವಿವರವಾದ ಆಹಾರ ಯೋಜನೆಗಾಗಿ ಮೊದಲು ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರೊಂದಿಗೆ ಸಮಾಲೋಚಿಸಿ. ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವುದು ಮತ್ತು ಆರೋಗ್ಯಕರ ಜೀವನ ಶೈಲಿಗೆ ಬದಲಾಯಿಸುವುದು ಥೈರಾಯ್ಡ್ ಅನ್ನು ನಿರ್ವಹಿಸಲು ಹೆಚ್ಚು ಸಹಾಯ ಮಾಡುತ್ತದೆ.