ಗೋಪಾಲಗಂಜ್ (ಬಿಹಾರ): ಕೆಲಸ ಅರಸಿ ನೈಜೀರಿಯಾಕ್ಕೆ ತೆರಳಿದ್ದ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಮೂಲದ ಸುಮಾರು 150 ಕಾರ್ಮಿಕರು ನೈಜೀರಿಯಾದಲ್ಲಿ ಸಿಲುಕಿ ಕೊಂಡಿದ್ದು, ಭಾರತಕ್ಕೆ ವಾಪಾಸ್ ಕರೆಸಿಕೊಳ್ಳವಂತೆ ಪ್ರಧಾನಿ ಮೋದಿ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಕೆಲಸ ನಿಮಿತ್ತ ನೈಜೀರಿಯಾಕ್ಕೆ ಹೋಗಿದ್ದ ಕಾರ್ಮಿಕರಿಗೆ ಕಳೆದ ಒಂಬತ್ತು ತಿಂಗಳಿಂದ ಸಂಬಳ ನೀಡದೆ, ತಮ್ಮ ಪಾಸ್ಪೋರ್ಟ್ ಮತ್ತು ವೀಸಾವನ್ನು ವಶಪಡಿಸಿಕೊಂಡು ಭಾರತಕ್ಕೆ ಮರಳಲು ಅವಕಾಶ ನೀಡುತ್ತಿಲ್ಲ. ತೀವ್ರ ಆರ್ಥಿಕ ಒತ್ತಡದಲ್ಲಿದ್ದು, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ನಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳಿ ಎಂದು ಕಾರ್ಮಿಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ನೈಜೀರಿಯಾದಲ್ಲಿ ಸಿಕ್ಕಬಿದ್ದವರ ಪೈಕಿ 11 ಜನ ಬಿಹಾರದ ಗೋಪಾಲ್ಗಂಜ್ನವರಾಗಿದ್ದು, ಈ ಬಗ್ಗೆ ಕಾರ್ಮಿಕರ ಕುಟುಂಬದವರು ಗೋಪಾಲ್ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನವಲ್ ಕಿಶೋರ್ ಚೌಧರಿ ಮತ್ತು ಸಂಸದ ಡಾ. ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಿ ವಾಪಸ್ ಕರೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ನವಲ್ ಕಿಶೋರ್ ಚೌಧರಿ ಮಾತನಾಡಿ, "ನೈಜೀರಿಯಾದಲ್ಲಿ ಸಿಲುಕಿಕೊಂಡಿರುವ ಗೋಪಲ್ಗಂಜ್ ಜಿಲ್ಲೆಯ 11 ಜನರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಮತ್ತು ಗೃಹ ಸಚಿವಾಲಯಕ್ಕೆ ಸಂಪರ್ಕಿಸಿದ್ದೇನೆ, ಅವರನ್ನು ಶೀಘ್ರದಲ್ಲೇ ಮರಳಿ ಭಾರತಕ್ಕೆ ಕರೆತರಲಾಗುವುದು" ಎಂದು ಹೇಳಿದರು.
ಸಿಕ್ಕಿಬಿದ್ದವರಲ್ಲಿ ಬಿಹಾರದ ಬೇಗುಸರೈ, ಮಧುಬನಿ ಮತ್ತು ಮೋತಿಹಾರಿ, ಜಾರ್ಖಂಡ್ನ ಪಲಾಮು, ಗರ್ವಾ ಮತ್ತು ಉತ್ತರ ಪ್ರದೇಶದ ದೇವಾರಿಯಾ ಕುಶಿನಗರ, ಸಿದ್ಧಾರ್ಥನಗರ, ಪ್ರತಾಪ್ಗಡ್, ಬಲ್ಲಿಯಾ, ಬಸ್ತಿ, ಮತ್ತು ಗಾಜಿಪುರದ ಕಾರ್ಮಿಕರು ನೈಜೀರಿಯಾದಲ್ಲಿ ಸಿಲುಕಿಕೊಂಡಿದ್ದಾರೆ.
ಆಪರೇಷನ್ ಕೊಹಿಮಾ ಕಾಲಿಂಗ್: ಮಣಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆ ನಾಗಾಲ್ಯಾಂಡ್‌ನ ಅನೇಕ ಜನರು ಮಣಿಪುರದಲ್ಲಿ ಸಿಲುಕಿಕೊಂಡಿದ್ದಾರೆ. ಈ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು, ಅಸ್ಸೋಂ ರೈಫಲ್ಸ್ ಸ್ಪಿಯರ್ ಕಾರ್ಪ್ಸ್ ಅಡಿ ಎರಡು ಹಂತಗಳಲ್ಲಿ 'ಆಪರೇಷನ್ ಕೊಹಿಮಾ ಕಾಲಿಂಗ್' ಅನ್ನು ಕೈಗೊಂಡಿತು. 1ನೇ ಹಂತದಲ್ಲಿ 676 ವ್ಯಕ್ತಿಗಳು ಮತ್ತು 2ನೇ ಹಂತದಲ್ಲಿ 553 ವ್ಯಕ್ತಿಗಳನ್ನು ಸ್ಥಳಾಂತರಿಸಲಾಗಿದೆ.
2ನೇ ಹಂತದಲ್ಲಿ ಯೊರಿಪೋಕ್‌ನ 47 ಕೊನ್ಯಾಕ್ ಹುಡುಗಿಯರು ಸೇರಿದ್ದಾರೆ. ಈ ಬಾಲಕಿಯರನ್ನು ಹೊರತೆಗೆಯಲು ರಕ್ಷಣಾ ತಂಡ ತೌಬಲ್ ಜಿಲ್ಲೆಯ ಒಳಭಾಗಗಳಿಗೆ ತೆರಳಿದೆ. ಅವರೆಲ್ಲರೂ ವೆನೀರ್ ಕಾರ್ಖಾನೆಯಲ್ಲಿ ಗಂಟೆಯ ವೇತನದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಮ್ಯಾನ್ಮಾರ್ನಿಂದ ಅಕ್ರಮವಾಗಿ ವಲಸೆ ಬರುತ್ತಿರುವರಿಂದಲೇ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಪೀಪಲ್ಸ್ ಅಲೆಯನ್ಸ್ ಫಾರ್ ಪೀಸ್ ಅಂಡ್ ಪ್ರೊಗ್ರೆಸ್ ಮಣಿಪುರ ಮತ್ತು ದೆಹಲಿ ಮಣಿಪುರ ಆರೋಪಿಸಿದೆ.
ಮ್ಯಾನ್ಮಾರ್ದಿಂದ ಅಕ್ರಮವಾಗಿ ಬಂದ ಕುಕಿ ಸಮುದಾಯದ ಜನರು ಕೇಂದ್ರ ಸರ್ಕಾರದಲ್ಲಿ ಅಕ್ರಮವಾಗಿ ಉದ್ಯೋಗ ಪಡೆದಿದ್ದಾರೆ ಎಂದು ದೆಹಲಿ ಮಣಿಪುರಿ ಸೊಸೈಟಿ ಮತ್ತು ಜವಹಾರ್ ಲಾಲ್ ನೆಹರು ಯುನಿವರ್ಸಿಟಿಯ ಪ್ರೊಫೆಸರ್ ಭಗತ್ ಒನಿಮ್ ದೂರಿದ್ದಾರೆ.
ಇದನ್ನೂ ಓದಿ: ಮಣಿಪುರದ ಸೂಕ್ಷ್ಮ ಪ್ರದೇಶದಲ್ಲಿ ಭದ್ರತಾ ಪಡೆಗಳ ಧ್ವಜ ಮೆರವಣಿಗೆ, ಬಲ ಪ್ರದರ್ಶನ