ಮುಜಾಫರ್‌ಪುರ, ಬಿಹಾರ: ಕನಸಿನ ಮನೆ ನಿರ್ಮಾಣ ಬಹುತೇಕ ಜನರ ಆಶಯ. ಮನೆ ಕಟ್ಟಿಕೊಳ್ಳಬೇಕೆಂದರೆ ಅದಕ್ಕೆ ಹಣ ತುಂಬಾನೇ ಮುಖ್ಯ. ಕೆಲವೊಮ್ಮೆ ಮನೆ ನಿರ್ಮಾಣಕ್ಕೆ ಹಣವಿದ್ದರೂ, ಜಾಗದ ಕೊರತೆ ಇರುತ್ತದೆ. ಜಮೀನನ್ನು ಕೊಂಡು ಮನೆ ನಿರ್ಮಾಣ ಮಾಡುವ ಪರಿಸ್ಥಿತಿಯಲ್ಲಿ ಎಲ್ಲರೂ ಇರುವುದಿಲ್ಲ.
ಇರುವ ಜಾಗದಲ್ಲೇ ಮನೆ ನಿರ್ಮಾಣ ಮಾಡಿಕೊಳ್ಳುವ ಜನರನ್ನೂ ನಾವು ನೋಡಿರುತ್ತೇವೆ. ಆದರೆ ಬಿಹಾರದಲ್ಲಿ ಒಂದು ಕಟ್ಟಡವಿದೆ. ಕೇವಲ ಆರು ಅಡಿ ಅಗಲವಿರುವ ಜಾಗದಲ್ಲೇ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅದೂ ಕೂಡಾ ಐದು ಅಂತಸ್ತಿನ ಕಟ್ಟಡದಲ್ಲಿ ಮನೆ, ಕೋಚಿಂಗ್ ಸೆಂಟರ್ಗಳೂ ಕಾರ್ಯ ನಿರ್ವಹಿಸುತ್ತಿವೆ.
ಅಚ್ಚರಿಯಾದರೂ ಸತ್ಯ. ಬಿಹಾರದ ಮುಜಾಫರ್ಪುರದ ಗನ್ನಿಪುರದಲ್ಲಿ ಇಂತಹ ಮನೆಯನ್ನು ನಾವು ನೋಡಬಹುದಾಗಿದೆ. ಈ ಕಟ್ಟಡವನ್ನು ನೋಡಲು ದೂರದ ಊರುಗಳಿಂದ ಜನರು ಬರುತ್ತಾರೆ. ಕೆಲವರು ಇದನ್ನು ಮುಜಾಫರ್ಪುರದ ಐಫೆಲ್ ಟವರ್ ಎಂದು ಕರೆಯುತ್ತಾರೆ. ಇನ್ನೂ ಕೆಲವರು ಇದನ್ನು ವಿಚಿತ್ರ ಮನುಷ್ಯ ನಿರ್ಮಿಸಿದ 'ಅದ್ಭುತ ಮನೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಶೋಷ್ ಮತ್ತು ಅರ್ಚನಾ ಮನೆಯ ಮಾಲೀಕರಾಗಿದ್ದಾರೆ. 6 ಅಡಿ ಅಗಲದ ಮತ್ತು 45 ಅಡಿ ಉದ್ದವಿರುವ ಹಾಗೆ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. 2012ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿದ್ದು, 2015ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಇದನ್ನು ಹಲವರು ವಂಡರ್ ಹೌಸ್ ಎಂದೂ ಕರೆಯುತ್ತಾರೆ.
ಇದನ್ನೂ ಓದಿ: ಫೆ.14ರಂದು ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ ಸಿ-52 ರಾಕೆಟ್ ಉಡಾವಣೆ
ಕಟ್ಟಡದ ಕೆಳಗಿನ ಮನೆಯ ಅರ್ಧಭಾಗದಲ್ಲಿ ಮೇಲಿನ ಅಂತಸ್ತುಗಳನ್ನು ನಿರ್ಮಾಣ ಮಾಡಲಾಗಿದೆ. ಜನರು ಈ ಕಟ್ಟಡದ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ವಿಡಿಯೋ ಕೂಡಾ ಮಾಡುತ್ತಾರೆ. ಕೆಲವು ಬಾರಿ ಅನೇಕ ಮಂದಿ ಮನೆಯೊಳಗೆ ತೆರಳಿ ಇಡೀ ಮನೆ ಹೇಗಿದೆ ಎಂದು ಪರೀಕ್ಷಿಸುವುದು ಕೂಡಾ ಆಗಾಗ ನಡೆಯುತ್ತದೆ ಎಂದು ತಿಳಿದು ಬಂದಿದೆ.