ನವದೆಹಲಿ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಗಿಟ್ಟಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ. ಇದೀಗ ದೆಹಲಿಯ ಸಾರಿಗೆ ಇಲಾಖೆಯಲ್ಲೂ ಉದ್ಯೋಗ ಪಡೆದು ಚಾಲಕರಾಗಿ ವೃತ್ತಿ ಆರಂಭಿಸಿದ್ದಾರೆ. ಮಂಗಳವಾರ ದೆಹಲಿ ಸರ್ಕಾರ 11 ಮಹಿಳಾ ಚಾಲಕಿಯರಿಗೆ ನೇಮಕಾತಿ ಪತ್ರ ನೀಡುವ ಮೂಲಕ ಅಧಿಕೃತವಾಗಿ ಹುದ್ದೆಗೆ ಸೇರಿಸಿಕೊಂಡಿದೆ.
ಫೆಬ್ರವರಿಯಲ್ಲಿ ದೆಹಲಿ ಸರ್ಕಾರ ಸಾರಿಗೆ ಇಲಾಖೆಯಲ್ಲಿ ಬದಲಾವಣೆ ತಂದು ಮಹಿಳೆಯರಿಗೂ ಚಾಲನಾ ವೃತ್ತಿ ನೀಡಲು ಮುಂದಾಗಿತ್ತು. ಅದಕ್ಕಾಗಿ ಕೆಲ ಮಾನದಂಡಗಳನ್ನು ಸಡಿಲ ಮಾಡಿ ಅರ್ಜಿ ಆಹ್ವಾನಿಸಿತ್ತು. ವೃತ್ತಿ ಅರಸಿ ಬಂದ ಮಹಿಳೆಯರಿಗೆ ಆಪ್ ಸರ್ಕಾರದ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಬುರಾರಿಯಲ್ಲಿರುವ ಸೊಸೈಟಿ ಫಾರ್ ಡ್ರೈವಿಂಗ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಕೊಡಿಸಿದ್ದಾರೆ.
ಚಾಲನಾ ಪರವಾನಗಿ ಪಡೆಯಲು 180 ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಿಗಾಗಿ ಸರ್ಕಾರ, ಅಶೋಕ್ ಲೇಲ್ಯಾಂಡ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡು ತಂಡಗಳಲ್ಲಿ ತರಬೇತಿ ಕೊಡಿಸುತ್ತಿದೆ.
ಎರಡು ಬ್ಯಾಚ್‌ಗಳಲ್ಲಿ 81 ಮಹಿಳೆಯರು ಈಗಾಗಲೇ ಚಾಲನಾ ತರಬೇತಿ ಪೂರ್ಣಗೊಳಿಸಿದ್ದು, 38 ಜನರು ಭಾರಿ ಗಾತ್ರದ ವಾಹನ ಚಾಲನಾ ಪರವಾನಗಿ ಪಡೆದಿದ್ದಾರೆ. ಇವರಲ್ಲಿ 10 ಮಹಿಳೆಯರು ಪ್ರಸ್ತುತ ದೆಹಲಿ ಸಾರಿಗೆ ನಿಗಮದ ನಂದನಾಗ್ರಿ ಕೇಂದ್ರದ ಬಸ್ ಚಾಲಕರಾಗಿ ಸೇವೆ ಆರಂಭಿಸಿದ್ದಾರೆ. ಇನ್ನೂ 31 ಮಹಿಳೆಯರು ಇದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ನೇಮಕಾತಿ ಪತ್ರ ಹಂಚಿಕೆ ಮಾಡಿ ಮಾತನಾಡಿದ ಸಚಿವ ಕೈಲಾಶ್ ಗೆಹ್ಲೋಟ್, ನೇಮಕಾತಿ ಪತ್ರಗಳನ್ನು ಪಡೆದು ಚಾಲನಾ ವೃತ್ತಿ ಆಯ್ದುಕೊಂಡ ಮಹಿಳೆಯರಿಗೆ ಧನ್ಯವಾದ ಹೇಳುತ್ತೇನೆ. ಬಸ್ ಚಾಲನೆಯನ್ನು ವೃತ್ತಿಯಾಗಿ ಸ್ವೀಕರಿಸುವ ಮೂಲಕ ಸಮಾಜದಲ್ಲಿ ಮಾದರಿಯಾಗಿದ್ದಾರೆ. ಹೆಚ್ಚಿನ ಮಹಿಳೆಯರು ಬಸ್ ಚಾಲಕರಾಗಲು ಇವರು ಪ್ರೇರಕ ಎಂದರು.
ಓದಿ: ವಿವಾದಿತ ಹೇಳಿಕೆ.. ರಾಜಾಸಿಂಗ್ ವಿರುದ್ಧ ರಾತ್ರೋರಾತ್ರಿ ಪ್ರತಿಭಟನೆ