ಉತ್ತರಕಾಶಿ(ಉತ್ತರಾಖಂಡ): ವಯಸ್ಸು 50 ದಾಟುತ್ತಿದ್ದಂತೆ ಬಹುತೇಕ ಮಹಿಳೆಯರು ವಿಶ್ರಾಂತಿ ಪಡೆದುಕೊಳ್ಳಲು ಮುಂದಾಗುತ್ತಾರೆ. ಆದರೆ, ಇಲ್ಲೊಂದು 11 ಮಹಿಳೆಯರ ಗುಂಪು 4,977 ಕಿಲೋ ಮೀಟರ್ ಕ್ರಮಿಸಿ, ಹಿಮಾಲಯ ಪರ್ವತ ಶ್ರೇಣಿ ಏರಿ ಸಾಧನೆ ಮಾಡಿದೆ.
ಪರ್ವತಾರೋಹಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಬಚೇಂದ್ರ ಪಾಲ್ ಅವರು ಈ ತಂಡ ಮುನ್ನಡೆಸುತ್ತಿದ್ದು, ಅವರಿಗೆ 67 ವರ್ಷ ವಯಸ್ಸಾಗಿದೆ. ಕಳೆದ ಐದು ತಿಂಗಳಿಂದ ಈ ಚಾರಣ ಆರಂಭಿಸಿರುವ ಇವರು ಈಗಾಗಲೇ 37 ಪರ್ವತದ ಹಾದಿ ದಾಟಿದ್ದಾರೆ. 11 ಮಹಿಳೆಯರ ತಂಡ ಕಳೆದ ಮಾರ್ಚ್ 8ರಿಂದ ನವದೆಹಲಿಯಿಂದ ಪ್ರಯಾಣ ಆರಂಭಿಸಿದ್ದರು.
ಇಂಡೋ-ಮ್ಯಾನ್ಮಾರ್ ಗಡಿ ಬಳಿಯ ಅರುಣಾಚಲ ಪ್ರದೇಶದ 3,727 ಅಡಿ ಎತ್ತರದಲ್ಲಿರುವ ಪಾಂಗ್ ಸೌ ಪಾಸ್ನಿಂದ ಇವರ ದಂಡಯಾತ್ರೆ ಆರಂಭಗೊಂಡಿದ್ದು ಅಸ್ಸೋಂ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ನೇಪಾಳದ ಪ್ರಮುಖ ಪರ್ವತ ದಾಟಿ ಬಂದಿದ್ದಾರೆ. ಜೂನ್ 30ರಂದು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಗೆ ಆಗಮಿಸಿದ್ದು, ಅಲ್ಲಿನ ಜನರು ಭವ್ಯ ಸ್ವಾಗತ ನೀಡಿದ್ದಾರೆ.
ಇದನ್ನೂ ಓದಿ: 'ಥ್ಯಾಂಕ್ ಯೂ ಡಾಕ್ಟರ್' ವೈದ್ಯರ ದಿನಾಚರಣೆಯಂದು ಜೀವರಕ್ಷಕರಿಗೊಂದು ಸೆಲ್ಯೂಟ್
ಈ ಮಹಿಳೆಯರ ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಈ ಯಾತ್ರೆ ಆರಂಭಗೊಂಡಾಗ ಪೂರ್ಣಗೊಳಿಸುವ ನಂಬಿಕೆ ಸ್ವತ: ಬಚೇಂದ್ರಿ ಪಾಲ್ ಅವರಿಗೂ ಇರಲಿಲ್ವಂತೆ. ಆದರೆ, ಜನರಿಂದ ಸಿಕ್ಕ ಅಗಾಧ ಪ್ರತಿಕ್ರಿಯೆ, ಸ್ಫೂರ್ತಿಯಿಂದಾಗಿ ಈ ಕೆಲಸ ಸಾಧ್ಯವಾಯಿತು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಈ ಚಾರಣ ಆರಂಭಿಸಲಾಗಿದ್ದು, ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ತಂಡದಲ್ಲಿ ಕರ್ನಾಟಕದ ಇಬ್ಬರು ಮಹಿಳೆಯರೂ ಇದ್ದಾರೆ.
11 ಮಹಿಳೆಯರ ತಂಡ ಇಂತಿದೆ:
- ಬಚೇಂದ್ರಿ ಪಾಲ್(67 ವರ್ಷ)
- ಚೇತನಾ ಸಾಹು(ಪ. ಬಂಗಾಳ, 54 ವರ್ಷ)
- ಸವಿತಾ ಧಪ್ವಾಲ್ (ಛತ್ತೀಸ್‌ಗಢ,53 ವರ್ಷ)
- ಎಲ್ ಅನ್ನಪೂರ್ಣ (ಜಾರ್ಖಂಡ್,52 ವರ್ಷ)
- ಗಂಗೋತ್ರಿ ಸೋನೆಜಿ (ಗುಜರಾತ್,63 ವರ್ಷ)
- ಪಯೋ ಮುರ್ಮು (ಜಾರ್ಖಂಡ್,57 ವರ್ಷ)
- ಸುಷ್ಮಾ ಬಿಸ್ಸಾ (ರಾಜಸ್ಥಾನ,55 ವರ್ಷ)
- ಕೃಷ್ಣ ದುಬೆ (ಉತ್ತರ ಪ್ರದೇಶ, 59 ವರ್ಷ)
- ಬಿಮಲಾ ದೇವಸ್ಕರ್ (ಮಹಾರಾಷ್ಟ್ರ, 54 ವರ್ಷ)
- ವಸುಮತಿ ಶ್ರೀನಿವಾಸನ್ (ಕರ್ನಾಟಕ, 68 ವರ್ಷ)
- ಶಾಮಲಾ ಪದ್ಮನಾಭನ್ (ಕರ್ನಾಟಕ, 64 ವರ್ಷ)
ಜೂನ್ 1ರಿಂದ ಮತ್ತೆ ಅಭಿಯಾನ ಆರಂಭಿಸಿರುವ ಈ ತಂಡ ಇದೀಗ ಹಿಮಾಚಲ ಪ್ರದೇಶ ತಲುಪಿದ ಬಳಿಕ ಲೇಹ್-ಲಡಾಖ್ ದಾಟಿ, ಕಾರ್ಗಿಲ್ನಲ್ಲಿ ಅಭಿಯಾನ ಅಂತ್ಯಗೊಳಿಸುವ ಗುರಿ ಇಟ್ಟುಕೊಂಡಿದೆ.