ಪುಣೆ: ತನ್ನ ಗಂಡನ ಮೇಲಿನ ಅನುಮಾನಕ್ಕೆ ತಂಗಿಯ ಮುದ್ದಾದ ಮೂರು ವರ್ಷದ ಮಗನನ್ನು ಮಹಿಳೆಯೊಬ್ಬಳು ಕೊಲೆ ಮಾಡಿರುವ ಘಟನೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ?
ನಿರ್ಮಲಾ ಮತ್ತು ಆಕೆಯ ಕಿರಿಯ ಸಹೋದರಿ ಮಾರ್ಕೆಟ್ ಯಾರ್ಡ್ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿರ್ಮಲಾ ಕಿರಿಯ ಸಹೋದರಿಗೆ ಮೂರು ವರ್ಷದ ಚಾಕೆನ್ ಅವಧೇಶ್ ವರ್ಮಾ ಎಂಬ ಮಗನಿದ್ದನು. ತನ್ನ ಸಹೋದರಿ ಮತ್ತು ಗಂಡನ ಮಧ್ಯೆ ಕಾನೂನು ಬಾಹಿರ ಸಂಬಂಧ ಇರುವ ಅನುಮಾನ ನಿರ್ಮಲಾಗೆ ಕಾಡುತ್ತಿತ್ತು.
ದಿನದಿಂದ ದಿನಕ್ಕೆ ಅನುಮಾನ ಹೆಚ್ಚಾದ ಹಿನ್ನೆಲೆ ಮೇ 1ಕ್ಕೆ ತನ್ನ ಸಹೋದರಿ ಮಗುವನ್ನು ತಾವು ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಕರೆದೊಯ್ದು, ಕಟ್ಟಡದ ಪಕ್ಕದಲ್ಲಿರುವ ನೀರಿನ ಗುಂಡಿಗೆ ಎಸೆದು ಕೊಲೆ ಮಾಡಿದ್ದಾಳೆ. ಬಳಿಕ ತನಗೆ ಏನು ಅರಿಯದೇ ಸುಮ್ಮನಾಗಿದ್ದಾಳೆ.
ಮಗುವನ್ನು ಕಳೆದುಕೊಂಡ ಪೋಷಕರು ಮತ್ತು ಪೊಲೀಸರು ಇದು ಆಕಸ್ಮಿಕ ಘಟನೆ ಎಂದು ತಿಳಿದು ವಿಧಿ ವಿಧಾನಗಳ ಕಾರ್ಯ ಮುಗಿಸಿದ್ದರು. ಆದರೆ ಪೊಲೀಸರಿಗೆ ಮಾತ್ರ ಒಂದು ಸಣ್ಣ ಅನುಮಾನ ಕಾಡುತ್ತಿತ್ತು. ಆಕಸ್ಮಿಕ ಸಾವು ಪ್ರಕರಣ ಎಂದೇ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದರು.
ಸಿಸಿಟಿವಿಯೊಂದರಲ್ಲಿ ನಿರ್ಮಲಾ ತನ್ನ ಸಹೋದರಿ ಮಗುವನ್ನು ಕರೆದುಕೊಂಡು ತಾವೂ ಕೆಲಸ ಮಾಡುತ್ತಿದ್ದ ಕಟ್ಟಡದ ಬಳಿ ಹೋಗಿದ್ದಾಳೆ. ಅಲ್ಲಿಂದ ವಾಪಸ್ ಬರುವಾಗ ನಿರ್ಮಲಾ ಒಬ್ಬಳೇ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡಲೇ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.
ಈ ಘಟನೆ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.