ನವದೆಹಲಿ/ಗಾಜಿಯಾಬಾದ್: ಸಿನಿಮಾ ನೋಡುವ ಹುಚ್ಚು ಹೊಂದಿದ್ದ ಮಹಿಳೆಯೋರ್ವಳು ನಟಿಯರಂತೆ ಚಿನ್ನಾಭರಣ ಧರಿಸುವ ಆಸೆಯಿಂದ ಕಳ್ಳತನ ಹಾದಿ ಹಿಡಿದು, ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಮೂರು ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದಿರುವ ಆರೋಪದ ಮೇಲೆ ಮಹಿಳೆಯೋರ್ವಳ ಬಂಧನ ಮಾಡಲಾಗಿದೆ. ಬಂಧಿತ ಮಹಿಳೆ ದೆಹಲಿ-ಎನ್‌ಸಿಆರ್‌ನಲ್ಲಿ 26ಕ್ಕೂ ಹೆಚ್ಚು ಕಳ್ಳತನದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ಹೈ-ಪ್ರೊಫೈಲ್ ಸೊಸೈಟಿಯ ವಿವಿಧ ಮನೆಗಳಿಂದ ಚಿನ್ನಾಭರಣ ಕದ್ದಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಕೆಲಸ ಗಿಟ್ಟಿಸಿಕೊಳ್ಳುವ ವೇಳೆ ವಿವಿಧ ನಟಿಯರ ಹೆಸರು ಹೇಳಿಕೊಂಡಿದ್ದಾಳೆ. ಪೂನಂ, ಕಾಜೋಲ್, ಪ್ರೀತಿ ಎಂದು ತನ್ನನ್ನು ಪರಿಚಯ ಮಾಡಿಕೊಂಡಿದ್ದಳು. ಆದರೆ, ನಿಜವಾದ ಹೆಸರು ಮಾತ್ರ ತಿಳಿದು ಬಂದಿಲ್ಲ. ಮಹಿಳೆ ಜೊತೆ ಆಕೆಯ ಸಹಚರರೂ ಇರುವ ಶಂಕೆ ವ್ಯಕ್ತವಾಗಿದ್ದು, ಅವರಿಗೋಸ್ಕರ ಶೋಧಕಾರ್ಯ ನಡೆಸಲಾಗ್ತಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮೈಗೆ ಬೆಂಕಿ ಹಚ್ಚಿಕೊಂಡು ಬೈಕ್ ಜೊತೆಗೆ ಕೆರೆಗೆ ಹಾರಿದ ಯುವಕ: ಹುಚ್ಚು ಸಾಹಸಿಯ ಬಂಧನ
ವಿಚಾರಣೆ ವೇಳೆ, ತನಗೆ ಸಿನಿಮಾ ನೋಡುವುದೆಂದರೆ ತುಂಬಾ ಇಷ್ಟ. ನಟಿಯರ ರೀತಿಯಲ್ಲಿ ಆಭರಣ ಹಾಕಿಕೊಳ್ಳಬೇಕೆಂದು ಇಷ್ಟಪಡುತ್ತೇನೆ. ಅದೇ ಕಾರಣಕ್ಕಾಗಿ ಕಳ್ಳತನ ಮಾಡುತ್ತಿದ್ದೆ ಎಂದು ಹೇಳಿದ್ದಾಳೆ. ಸೊಸೈಟಿಯಲ್ಲಿ ಯಾವ ಮಹಿಳೆ ಹೆಚ್ಚು ಆಭರಣ ಹಾಕಿಕೊಳ್ಳುತ್ತಾಳೆ ಎಂಬುದನ್ನು ನೋಡಿ, ತದನಂತರ ಅಲ್ಲಿಗೆ ಹೋಗಿ ಕೆಲಸ ಕೇಳುತ್ತಿದ್ದೆ. ಇದಾದ ಬಳಿಕ ಕಳ್ಳತನ ಮಾಡುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.