ನಾಸಿಕ್(ಮಹಾರಾಷ್ಟ್ರ): ಅಣೆಕಟ್ಟುಗಳ ನಾಡು ಎಂದೇ ಖ್ಯಾತವಾಗಿರುವ ನಾಸಿಕ್ ಜಿಲ್ಲೆಯ ನೀರಿಗಾಗಿ ಆಹಾಕಾರ ಶುರುವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿಯೂ ಮಹಿಳೆಯರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಇಲ್ಲಿನ ತ್ರಯಂಬಕೇಶ್ವರದಲ್ಲಿರುವ ಮೆಟ್‌ಘರ್ ಕೋಟೆಯಲ್ಲಿ ಮಹಿಳೆಯರು ನೀರಿಗಾಗಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳು ಇಲ್ಲದೇ ಬಾವಿಗೆ ಇಳಿಯುತ್ತಿರುವ ದೃಶ್ಯ ಎಲ್ಲರಿಗೂ ಭಯ ಮೂಡಿಸುತ್ತಿದೆ.
ಜನರ ನೆತ್ತಿ ಸುಡುವ ಈ ಕಡು ಬೇಸಿಗೆಯಲ್ಲಿ ನಾಸಿಕ್‌ನ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಅಭಾವ ತೀವ್ರಗೊಂಡಿದೆ. ಜಿಲ್ಲೆಯ ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ತ್ರಯಂಬಕೇಶ್ವರದ ಮೆಟ್‌ಘರ್ ಗ್ರಾಮದಲ್ಲಿ ಮಹಿಳೆಯರು ಬಿಂದಿಗೆ ನೀರು ಪಡೆಯಲು ತಮ್ಮ ಪ್ರಾಣವನ್ನೇ ಪಣಕ್ಕಿಡಬೇಕಾಗಿದೆ.
ಓದಿ: ಸಂಬಂಧಿಕರಿಂದ ಕುಡಿಯುವ ನೀರು, ರಸ್ತೆಗೆ ಅಡ್ಡಿ.. ನೊಂದು ದಯಾಮರಣಕ್ಕೆ ಡಿಸಿ ಮೊರೆ ಹೋದ ಕುಟುಂಬ
ಇಲ್ಲಿನ ಮಹಿಳೆಯರು ನೀರಿಗಾಗಿ ಆಳದ ಬಾವಿಗೆ ಇಳಿದು ಅಲ್ಲಿದ್ದ ಅಲ್ಪ ನೀರನ್ನು ತುಂಬಿಕೊಂಡು ಬರಬೇಕಾಗುತ್ತದೆ. ಇಲ್ಲಿನ ಗ್ರಾಮದ ಮಹಿಳೆಯರು ಹೀನಾಯ ಸ್ಥಿತಿ ಎದುರಿಸುತ್ತಿದ್ದಾರೆ. ಬಾವಿಗೆ ಇಳಿಯುವಾಗ ಸ್ವಲ್ಪ ಯಾಮಾರಿದ್ರೂ ಶಿವನ ಪಾದ ಸೇರೋದು ಖಚಿತ ಎಂಬ ದುಸ್ಥಿತಿಯನ್ನು ಇಲ್ಲಿನ ಜನರು ಎದುರಿಸುತ್ತಿರುವುದು ವಿಪರ್ಯಾಸವೇ ಸರಿ.
ಈ ಬಗ್ಗೆ ರಾಜಕೀಯ ಮುಖಂಡರ ಬಳಿ ಹಲವು ಬಾರಿ ಪ್ರಸ್ತಾಪಿಸಿದ್ದೇವೆ. ಆದರೆ ಅವರು ನಮ್ಮ ಮಾತಿಗೆ ಕ್ಯಾರೇ ಎನ್ನುತ್ತಿಲ್ಲ. ಚುನಾವಣೆ ವೇಳೆ ನಮ್ಮನ್ನು ಭೇಟಿ ಮಾಡಿ, ಸಾಕಷ್ಟು ಭರವಸೆಗಳನ್ನು ನೀಡುತ್ತಾರೆ. ಆದರೆ ಈಗ ಯಾರೂ ಇಲ್ಲಿಗೆ ಬರುತ್ತಿಲ್ಲ. ಹೀಗಾಗಿ ನೀರಿಗಾಗಿ ನಾವೇ ಹೋರಾಟ ಮಾಡಬೇಕಾಗಿದೆ ಎಂದು ಗ್ರಾಮದ ಮಹಿಳೆಯರ ಮಾತಾಗಿದೆ.