ಫಿರೋಜಾಬಾದ್ (ಉತ್ತರ ಪ್ರದೇಶ): ಕೆಲವು ಮಹಿಳೆಯರು ಸೇರಿ ಬಿಜೆಪಿ ಮುಖಂಡರೊಬ್ಬರಿಗೆ ಚಪ್ಪಲಿಯಿಂದ ಮನಬಂದಂತೆ ಥಳಿಸಿರುವ ಘಟನೆ ಫಿರೋಜಾಬಾದ್ ಜಿಲ್ಲೆಯಲ್ಲಿ ನಿನ್ನೆ (ಬುಧವಾರ) ನಡೆದಿದೆ. ಮಹಿಳೆಯರು ಮುಖಂಡನ ಬಟ್ಟೆ ಹರಿದು ಕತ್ತು ಹಿಸುಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಕುರಿತಂತೆ ಮುಖಂಡನ ಬೆಂಬಲಿಗರು ನೀಡಿದ ದೂರಿನನ್ವಯ 10 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಟೇಷನ್ ರಸ್ತೆಯಲ್ಲಿರುವ ತುಂಡ್ಲಾ ನಗರ ಕೇಂದ್ರದ ಮುಂಭಾಗದಲ್ಲಿ ಧರ್ಮಶಾಲೆ ವಿಚಾರವಾಗಿ ಗಲಾಟೆ ನಡೆದಿದೆ. ಕೆಲವರು ಧರ್ಮಶಾಲೆಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸುತ್ತಿದ್ದು ಇದಕ್ಕೆ ಕೆಲವು ಮಹಿಳೆಯರು ಮತ್ತು ಪುರುಷರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆಯಲು ಬುಧವಾರ ಬಿಜೆಪಿ ಮುಖಂಡ ಬಂದಿದ್ದರು. ಮುಖಂಡನನ್ನು ನೋಡಿದ ತಕ್ಷಣ ಅಲ್ಲಿದ್ದ ಜನರು ಮಹಿಳೆಯರು ಸೇರಿದಂತೆ ಹಲವರು ಆಕ್ರೋಶಗೊಂಡು ಥಳಿಸಿದರು ಎಂದು ಆರೋಪಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲೇ ಚಪ್ಪಲಿಯಿಂದ ಹಲ್ಲೆ ನಡೆಸುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಬಟ್ಟೆ ಹರಿದು ಹಾಕುವ ಜೊತೆಗೆ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ ಪ್ರಕರಣದ ಬಳಿಕ ಸ್ಟೇಷನ್ ರಸ್ತೆಯಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಕೆಲವರನ್ನು ವಶಕ್ಕೆ ಪಡೆದರು. ಪೊಲೀಸ್ ಠಾಣೆಯಲ್ಲಿ ಹಲ್ಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಹತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಲಾಗಿದೆ. ಧರ್ಮಶಾಲಾ ಜಮೀನಿಗೆ ಸಂಬಂಧಿಸಿದಂತೆ ವಿವಾದವಿತ್ತು ಎಂದು ಪೊಲೀಸ್ ಠಾಣೆಯ ಪ್ರಭಾರಿ ತುಂಡ್ಲ ಪ್ರದೀಪ್ ಕುಮಾರ್ ಮಾಹಿತಿ ನೀಡಿದರು. ತನಿಖೆ ನಡೆಯುತ್ತಿದೆ. ಆರೋಪಿಗಳ ಬಂಧನಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಡಿಎಸ್‌ಪಿ ಹುಮಾಯೂನ್ ಮುಜಾಮ್ಮಿಲ್ ಅಂತ್ಯಕ್ರಿಯೆ