ಚೆನ್ನೈ(ತಮಿಳುನಾಡು): ತನ್ನ ಪ್ರಿಯಕರನನ್ನು ನೋಡಲು ಟೆರೇಸ್‌ನಿಂದ ಸೀರೆಯ ಸಹಾಯದಿಂದ ಬಾಲ್ಕನಿಗೆ ಹೋಗಲು ಯತ್ನಿಸಿ ಯುವತಿಯೊಬ್ಬಳು ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ನಾಮಕ್ಕಲ್ ಜಿಲ್ಲೆಯ ಮಖಿಲಮತಿ (25) ಮೃತ ಯುವತಿ.
ಈಕೆ ಚೆನ್ನೈನ ಖಾಸಗಿ ಸಿವಿಲ್ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಐಎಎಸ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದು, ಜಾಂಬಜಾರ್ನಲ್ಲಿ ಅಪಾರ್ಟ್ಮೆಂಟ್ ನಲ್ಲಿ ತಂಗಿದ್ದಳು. ಆಕೆಯ, ಪ್ರಿಯಕರ ರಾಜ್ ಕುಮಾರ್ ಐಟಿ ಉದ್ಯೋಗಿಯಾಗಿದ್ದು, ಅದೇ ಅಪಾರ್ಟ್ ಮೆಂಟ್ನಲ್ಲಿ ವಾಸವಾಗಿದ್ದರು. ಮಖಿಲಮತಿ ಮತ್ತು ರಾಜ್ ಕುಮಾರ್ ಆಗಾಗ ಭೇಟಿಯಾಗುತ್ತಿದ್ದರು.
ಗುರುವಾರ (ಜೂ.9) ರಾತ್ರಿ ಮಖಿಲಮತಿ ತರಗತಿ ಮುಗಿಸಿಕೊಂಡು ಮನೆಗೆ ಬಂದು ಸ್ನೇಹಿತ ರಾಜ್ ಕುಮಾರ್ ಅವರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ, ರಾಜ್‌ಕುಮಾರ್ ಬಾಗಿಲು ತೆರೆಯಲಿಲ್ಲ. ಬಳಿಕ ಅವರ ಮೊಬೈಲ್‌ಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಕ್ಕೊಳಗಾದ ಯುವತಿ, ಸೀರೆಯನ್ನು ಬಳಸಿಕೊಂಡು 3ನೇ ಮಹಡಿಯಿಂದ ಬಾಲ್ಕನಿಗೆ ಇಳಿದು ಹಿಂಬಾಗಿಲಿನ ಮೂಲಕ ಮನೆಗೆ ಪ್ರವೇಶಿಸಲು ಯೋಜಿಸಿದ್ದಳು. ಅದರಂತೆ ಸೀರೆಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕೆಳಗೆ ಇಳಿಯುತ್ತಿದ್ದಾಗ ಸೀರೆ ಹರಿದಿದ್ದು, ಮಖಿಲಮತಿ 3ನೇ ಮಹಡಿಯಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.
ಘಟನೆ ಕುರಿತು ಮಾಹಿತಿ ಪಡೆದ ಜಾಂಬಜಾರ್ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಜ್‌ಕುಮಾರ್ ಖಾಸಗಿ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮನೆಗೆ ಬಂದವನು ಸುಸ್ತಾಗಿ ನಿದ್ದೆಗೆ ಜಾರಿದ್ದು, ಯುವತಿ ಬಾಗಿಲು ಬಡಿದ ಸದ್ದು ಕೇಳಿಸಲಿಲ್ಲ ಎಂದು ತನಿಖೆ ವೇಳೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಜಮೀನು ವಿವಾದ: ಯುವತಿ ಕೊಲೆ ಮಾಡಿ, 3 ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!