ಮಥುರಾ: ನ್ಯಾಯಕ್ಕಾಗಿ ಹೋರಾಡಿ ಬೇಸತ್ತ ಮಹಿಳೆಯೊಬ್ಬಳು ಶನಿವಾರದಂದು ನೇರ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಬಳಿಕ ಠಾಣೆಯ ಮುಂದೆ ಬೆಂಕಿ ಹಚ್ಚಿಕೊಂಡ ಮಹಿಳೆ ಭಾನುವಾರ ರಾತ್ರಿ ಸುಟ್ಟಗಾಯಗಳಿಂದ ಚೇತರಿಸಿಕೊಳ್ಳಲಾಗದೇ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ರಾಯರ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಪರಿಹಾರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ದೂರುದಾರರು ಪೊಲೀಸ್ ಠಾಣೆ ಆವರಣಕ್ಕೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಈ ವೇಳೆ ನಾಲ್ಕು ವರ್ಷಗಳಿಂದ ನ್ಯಾಯ ಸಿಗದ ಹಿನ್ನೆಲೆ ಮಹಿಳೆಯೊಬ್ಬರು ಠಾಣೆ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಬೆಂಕಿಯನ್ನು ಕಂಡ ಪೊಲೀಸರು ಮಹಿಳೆಯನ್ನು ರಕ್ಷಿಸಲು ಧಾವಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಇದಾದ ಬಳಿಕ ಮಹಿಳೆಯ ಸ್ಥಿತಿ ಚಿಂತಾಜನಕವಾಗಿರುವುದನ್ನು ಕಂಡ ಜಿಲ್ಲಾ ಆಸ್ಪತ್ರೆಯ ವೈದ್ಯರು ಆಕೆಯನ್ನು ಆಗ್ರಾ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪ್ಪಿದ್ದಾರೆ.
ಓದಿ:ಕನ್ನಡದ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ್ ಪಾಟೀಲ್ ನಿಧನ
ಮಾಹಿತಿ ಪ್ರಕಾರ, ರಾಯ ಪೊಲೀಸ್ ಠಾಣೆಯ ನಿವಾಸಿ 45 ವರ್ಷದ ಮಹಿಳೆಯೊಬ್ಬರು ಸುಮಾರು ನಾಲ್ಕು ವರ್ಷಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದರು. ಆದರೆ, ವಿಚಾರಣೆ ನಡೆದು ವರ್ಷಗಳೇ ಕಳೆದರೂ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದರೊಂದಿಗೆ ಆರೋಪಿಯು ಪ್ರಕರಣ ಹಿಂಪಡೆಯುವಂತೆ ಮಹಿಳೆಗೆ ಒತ್ತಡ ಹೇರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದಾಗಿ ಪರಿಹಾರ ದಿನದಂದು ಮಹಿಳೆ ದೂರು ನೀಡಿ ಹಲವು ಬಾರಿ ಠಾಣೆ ಆವರಣಕ್ಕೆ ಆಗಮಿಸಿದ್ದರು. ಆರೋಪಿ ಬಂಧಿಸುವಂತೆ ಮಹಿಳೆ ಅಧಿಕಾರಿಗಳ ಮುಂದೆ ಒತ್ತಾಯಿಸಿದರು. ಆದರೆ, ಸಂತ್ರಸ್ತ ಮಹಿಳೆ ಮಾತು ಪೊಲೀಸರು ಕೇಳಿರಲಿಲ್ಲ. ಬಳಿಕ ಶನಿವಾರ ಮಹಿಳೆ ಪೊಲೀಸ್ ಠಾಣೆ ಆವರಣದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ, ಮಹಿಳೆಗೆ ಶೇ 96ರಷ್ಟು ಸುಟ್ಟ ಗಾಯಗಳಾಗಿವೆ. ನಂತರ ಮಹಿಳೆಯನ್ನು ಚಿಕಿತ್ಸೆಗಾಗಿ ಆಗ್ರಾ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೌರವ್ ಗ್ರೋವರ್ ಹೇಳಿದ್ದಾರೆ.
ಗ್ರಾಮದ ಪ್ರಧಾನ್ ಅವರ ತಂದೆ ಸೇರಿದಂತೆ ನಾಲ್ವರ ವಿರುದ್ಧ ಐಪಿಸಿಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 511 (ಜೀವಾವಧಿ ಶಿಕ್ಷೆಗೆ ಗುರಿಯಾಗುವ ಅಪರಾಧಗಳನ್ನು ಮಾಡಲು ಪ್ರಯತ್ನಿಸುವುದು) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣ ಹಿಂಪಡೆಯದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆದರಿಕೆ
ಈ ತಿಂಗಳ ಆರಂಭದಲ್ಲಿ ಮಹಿಳೆಯ ಗ್ರಾಮದಲ್ಲಿ ಪಂಚಾಯತ್ ನಡೆದಿತ್ತು. ಈ ಪಂಚಾಯತ್ನಲ್ಲಿ 50 ನಿವಾಸಿಗಳು ಭಾಗವಹಿಸಿದ್ದವು. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿಯಿರುವುದರಿಂದ ದೂರು ಹಿಂಪಡೆಯುವಂತೆ ಆರೋಪಿಗಳ ಜತೆ ಸದಸ್ಯರು ಮಹಿಳೆಯ ಮೇಲೆ ಒತ್ತಡ ಹೇರಿದ್ದರು. ಹಾಗೆ ಮಾಡದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಭಾನುವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದವರನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗ್ರೋವರ್ ತಿಳಿಸಿದ್ದಾರೆ.
ಪೊಲೀಸ್ ವರದಿಗಳ ಪ್ರಕಾರ, ಜುಲೈ 2017 ರಲ್ಲಿ ಮಹಿಳೆಗೆ ಸ್ಥಳೀಯರು ಕಿರುಕುಳ ನೀಡಿದ್ದರು. ಐಪಿಸಿಯ ಸೆಕ್ಷನ್ 354 ಅಡಿ ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. 15 ದಿನಗಳ ಬಳಿಕ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಆ ಮೃತ ಮಹಿಳೆಗೆ ಈಗಲಾದ್ರೂ ನ್ಯಾಯ ದೊರೆಯುವುದಾ ಎಂಬುದು ಕಾದು ನೋಡ್ಬೇಕಾಗಿದೆ.