ರತಲಾಮ್(ಮಧ್ಯಪ್ರದೇಶ): ಮದುವೆಯಾಗುತ್ತಿಲ್ಲ ಎಂಬ ಖಿನ್ನತೆಯಲ್ಲಿದ್ದ ಮಹಿಳಾ ಸಬ್ಇನ್ಸ್ಪೆಕ್ಟರ್ವೋರ್ವಳು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ರತಲಾಮ್ನಲ್ಲಿ ನಡೆದಿದೆ.
ಸಾವನ್ನಪ್ಪಿರುವ ಸಬ್ ಇನ್ಸ್ಪೆಕ್ಟರ್ 35 ವರ್ಷದ ಕವಿತಾ ಸೋಲಂಕಿ ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಜೆಯಿಂದ ಮನೆಗೆ ಬಂದಿದ್ದ ಪೊಲೀಸ್ ಅಧಿಕಾರಿ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅದರ ಪ್ರಕಾರ ಮದುವೆಯಾಗದ ಕಾರಣದಿಂದಾಗಿ ಖಿನ್ನತೆಗೊಳಗಾಗಿದ್ದಳು ಎಂದು ತಿಳಿದು ಬಂದಿದೆ. ಜತೆಗೆ ಸಂಬಂಧಿಕರು ಮೇಲಿಂದ ಮೇಲೆ ಮದುವೆ ವಿಚಾರವಾಗಿ ಪ್ರಶ್ನೆ ಮಾಡುತ್ತಿದ್ದರು ಎನ್ನಲಾಗಿದೆ.
ಕವಿತಾ ಸೋಲಂಕಿ, ಮಧ್ಯಪ್ರದೇಶದ ರಾತಲಾಮ್ ಸ್ಟೇಷನ್ ರೋಡ್ನ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಹಾಯವಾಣಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರಜೆ ಮೇಲೆ ತೆರಳಿದ್ದ ಕವಿತಾ ಕೆಲ ದಿನ ಪೋಷಕರೊಂದಿಗೆ ಕಾಲ ಕಳೆದ ನಿನ್ನೆ ರತಲಾಮ್ಗೆ ವಾಪಸ್ ಆಗಿದ್ದರು.
ಪೊಲೀಸ್ ಇಲಾಖೆ ನೀಡಿದ್ದ ಕ್ವಾರ್ಟಸ್ನಲ್ಲಿ ಉಳಿದುಕೊಂಡಾಗ ವಿಷ ಸೇವಿಸಿದ್ದಾರೆ. ಇದರ ಬಗ್ಗೆ ಸಹದ್ಯೋಗಿಗೆ ಗೊತ್ತಾಗುತ್ತಿದ್ದಂತೆ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ತಿವಾರಿ, ವಯಸ್ಸಾಗಿದ್ದರಿಂದ ಮದುವೆಯಾಗಿರಲಿಲ್ಲ. ಹೀಗಾಗಿ ಬೇಸರಗೊಂಡಿದ್ದರು. ಜತೆಗೆ ಮದುವೆ ಬಗ್ಗೆ ಜನರು ಪ್ರಶ್ನೆ ಮಾಡ್ತಿದ್ದರಿಂದ ಖಿನ್ನತೆಗೊಳಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.