ನವದೆಹಲಿ : ಇನ್ನೊಬ್ಬ ಮಹಿಳೆಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾನೆ ಎಂದು ಶಂಕಿಸಿ ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದ ಸಂಗಾತಿಗೆ ಮಹಿಳೆಯೊಬ್ಬರು ಚಾಕುವಿನಿಂದ ಇರಿದ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ. ಬೇಬಿ ಲಾಲಂಗೈಹೌಮಿ (35) ಕೊಲೆ ಮಾಡಲು ಯತ್ನಿಸಿದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗಿನ ಜಾವ 4 ಗಂಟೆಗೆ ಮುನಿರ್ಕಾ ಪ್ರದೇಶದಲ್ಲಿ ವಾಸವಾಗಿರುವ ತನ್ನ ಲಿವ್ ಇನ್ ಪಾಲುದಾರ ಸ್ಯಾಮ್ಯುಯೆಲ್ ರೆಸು ಬೇರೊಬ್ಬ ಮಹಿಳೆಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾರೆ ಎಂದು ಅನುಮಾನಗೊಂಡ ಆರೋಪಿಯು ಬಳಿಕ ಜಗಳ ಮಾಡಿದ್ದಾಳೆ. ಕೆಲ ಕಾಲ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೋಪದ ಭರದಲ್ಲಿ ಆಕೆ, ಪ್ರೇಮಿಯ ಎದೆಗೆ ಚಾಕು ಇರಿದಿದ್ದಾಳೆ.
"ನಾಗಾಲ್ಯಾಂಡ್ ನಿವಾಸಿ ರೇಸು ಅವರ ಎದೆಗೆ ಚಾಕು ಇರಿದ ಪರಿಣಾಮ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಫ್ದರ್‌ಜಂಗ್ ಆಸ್ಪತ್ರೆಯಿಂದ ನಮಗೆ ಕರೆ ಬಂದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಕರೆ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡ ಗಾಯಗೊಂಡ ವ್ಯಕ್ತಿಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಮೆಡಿಕೋ ಲೀಗಲ್ ಪ್ರಕರಣದ ವರದಿ ಮತ್ತು ಗಾಯಾಳು ಹೇಳಿಕೆಯನ್ನು ಆಧರಿಸಿ ಪೊಲೀಸರು ಕಿಶನ್‌ಗಢ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಅಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಹಾಗೆಯೇ, ಆರೋಪಿ ಬೇಬಿಯನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಚಾಕುವನ್ನು ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಯುವಕನಿಗೆ ಮನಸೋಇಚ್ಛೆ ಚಾಕು ಇರಿದು ಹತ್ಯೆ: ದೆಹಲಿಯಲ್ಲಿ ಮರುಕಳಿಸಿದ ದುಷ್ಕೃತ್ಯ
ಮನಸೋ ಇಚ್ಛೆ ಚಾಕು ಇರಿದು ಹತ್ಯೆ : ದಿನದಿಂದ ದಿನಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಮೂವರು ಯುವಕರು ಗಲಾಟೆ ಮಾಡಿಕೊಳ್ಳುತ್ತಿರುವಾಗ ಓರ್ವ ಚಾಕುವಿನಿಂದ ತನಗಿಷ್ಟ ಬಂದಂತೆ ಎದುರಿನ ಯುವಕನಿಗೆ ಚುಚ್ಚಿದ್ದ ಘಟನೆ ಇದೇ ತಿಂಗಳ 5ನೇ ತಾರೀಖಿನಂದು ಬೆಳಕಿಗೆ ಬಂದಿತ್ತು. ಇಲ್ಲಿನ ಶಹಬಾದ್ ಡೈರಿಯ ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್ ಆಗಿತ್ತು. ಇದಕ್ಕೂ ಮುನ್ನಾ ಮೇ 29 ರಂದು ಸಾಹಿಲ್ ಖಾನ್ ಎಂಬಾತ ಸಾಕ್ಷಿ ಎಂಬ ಬಾಲಕಿಯನ್ನ ಅತ್ಯಂತ ಅಮಾನವೀಯವಾಗಿ ಕೊಂದು ಹಾಕಿದ ಪ್ರಕರಣ ದೆಹಲಿಯಲ್ಲಿ ನಡೆದಿತ್ತು.
ಇನ್ನು ಕಳೆದ ನಾಲ್ಕು ದಿನಗಳ ಹಿಂದಷ್ಟೇ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಂದು ದೇಹವನ್ನು 13 ತುಂಡಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಕೇಸ್ಗೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯನ್ನ 13 ತುಂಡುಗಳಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಕ್ರೂರಿ