ಕೋಯಿಕ್ಕೋಡ್ : ಸಾಕು ನಾಯಿಗಳು ಮಹಿಳೆ ಮೇಲೆ ದಾಳಿ(dogs attack) ನಡೆಸಿ ಮಹಿಳೆಯನ್ನ ಗಂಭೀರವಾಗಿ ಗಾಯಗೊಳಿಸಿವೆ. ತಾಮರಸ್ಸೆರಿ ಮೂಲದ ಫೌಜಿಯಾ ಎಂಬಾಕೆಗೆ ರೋಷನ್ ಮಾಲೀಕತ್ವದ ನಾಯಿಗಳು ಕಚ್ಚಿ ಅಟ್ಟಹಾಸ ಮೆರೆದಿವೆ.
ಉದ್ದೇಶಪೂರ್ವಕವಾಗಿ ನಾಯಿಗಳನ್ನು ಕಚ್ಚಲು ಬಿಚ್ಚಿದ್ದಾರೆ ಎಂಬ ಆರೋಪದ ಮೇಲೆ ನಾಯಿಯ ಮಾಲೀಕ ರೋಷನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ಮಹಿಳೆಯನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ (Kozhikode Medical College) ದಾಖಲಿಸಲಾಗಿದೆ.
ನಾಯಿಗಳು ಫೌಜಿಯಾಳನ್ನು ಕಚ್ಚುತ್ತಿರುವುದನ್ನು ರೋಷನ್ ಕಂಡರೂ ಆಕೆಯನ್ನು ರಕ್ಷಿಸಲು ಹತ್ತಿರ ಬಂದಿಲ್ಲ ಎನ್ನಲಾಗ್ತಿದೆ. ನಂತರ ಸ್ಥಳೀಯರು ದೌಡಾಯಿಸಿದಾಗ ಆತ ಸ್ಥಳಕ್ಕೆ ಧಾವಿಸಿದ್ದಾನೆ ಎಂದು ಅಲ್ಲಿನ ಜನರು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಪ್ರಭಾಕರ ಎಂಬಾತನಿಗೆ ನಾಯಿ ಕಚ್ಚಿದ್ದರಿಂದ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಈ ಹಿಂದೆಯೂ ಹಲವು ಮಂದಿ ಇವರ ನಾಯಿಗಳ ದಾಳಿಗೆ ಒಳಗಾಗಿದ್ದಾರೆ. ಆದರೂ ಸಹ ಮಾಲೀಕ ನಾಯಿಗಳನ್ನು ಕಟ್ಟಿಹಾಕದೆ ಪದೇಪದೆ ಇಂತಹ ಅಚಾತುರ್ಯಕ್ಕೆ ಎಡೆ ಮಾಡಿಕೊಡುತ್ತಿದ್ದಾನೆ ಎಂದು ಸ್ಥಳೀಯರು ನಾಯಿಗಳ ಮಾಲೀಕನ ವಿರುದ್ಧ ಕಿಡಿಕಾರಿದ್ದಾರೆ.