ಚಂದ್ರಪುರ(ಮಹಾರಾಷ್ಟ್ರ): ಹೆತ್ತ ಮಕ್ಕಳ ರಕ್ಷಣೆಗೋಸ್ಕರ ತಾಯಿ ಏನು ಬೇಕಾದ್ರೂ ಮಾಡುತ್ತಾಳೆ ಎಂಬುದು ಅನೇಕ ಸಲ ಸಾಭೀತುಗೊಂಡಿದೆ. ಸದ್ಯ ಅಂತಹದೊಂದು ಘಟನೆ ಮಹಾರಾಷ್ಟ್ರದ ಚಂದ್ರಪುರದಲ್ಲಿನ ಜುನೊನಾ ಎಂಬ ಗ್ರಾಮದಲ್ಲಿ ನಡೆದಿದ್ದು, 5 ವರ್ಷದ ಮಗಳ ರಕ್ಷಣೆಗೋಸ್ಕರ ತಾಯಿ ದುರ್ಗಿ ರೂಪ ತಾಳಿದ್ದಾಳೆ.
ಚಂದ್ರಪುರದ ಜುನೊನಾ ಎಂಬ ಅರಣ್ಯ ಪ್ರದೇಶದ ಗ್ರಾಮದಲ್ಲಿ ಮೇಲಿಂದ ಮೇಲೆ ಹುಲಿ, ಚಿರತೆ ಸೇರಿದಂತೆ ಕ್ರೂರ ಪ್ರಾಣಿಗಳ ದಾಳಿ ನಡೆಯುತ್ತಿರುತ್ತದೆ. ನಿನ್ನೆ ಕೂಡ ಚಿರತೆವೊಂದು ಐದು ವರ್ಷದ ಮಗುವಿನ ಮೇಲೆ ದಾಳಿ ನಡೆಸಿದೆ. ಈ ವೇಳೆ ಇನ್ನೊಬ್ಬರ ಸಹಾಯಕ್ಕೆ ಕಾಯುವ ಬದಲು ಹೆತ್ತಮ್ಮ ಖುದ್ದಾಗಿ ಕೈಯಲ್ಲಿ ಕೋಲು ಹಿಡಿದು ಚಿರತೆ ಮೇಲೆ ದಾಳಿ ನಡೆಸಿದ್ದಾಳೆ. ಮಹಿಳೆಯ ದಾಳಿಗೆ ಕಂಗೆಟ್ಟಿರುವ ಚಿರತೆ ಮಗು ಬಿಟ್ಟು ಕಾಲ್ಕಿತ್ತಿದೆ.
ತಾಯಿ ಅರ್ಚನಾ ತನ್ನ 5 ವರ್ಷದ ಮಗಳೊಂದಿಗೆ ತರಕಾರಿ ತರಲು ಪಕ್ಕದ ಜಮೀನಿಗೆ ತೆರಳಿದ್ದಳು. ಈ ವೇಳೆ ಮಗುವಿನ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದೆ. ಇದನ್ನ ನೋಡಿರುವ ತಾಯಿ ತಕ್ಷಣವೇ ಅಲ್ಲೇ ಬಿದ್ದ ಕೋಲು ಕೈಯಲ್ಲಿ ಹಿಡಿದುಕೊಂಡು ಅದರ ಮೇಲೆ ದಾಳಿ ನಡೆಸಿದ್ದಾಳೆ. ಈ ವೇಳೆ ಚಿರತೆ ಮಹಿಳೆ ಮೇಲೂ ದಾಳಿಗೆ ಮುಂದಾಗಿದೆ. ಆದರೆ ಕೋಲಿನ ಸಹಾಯದಿಂದಲೇ ಅದನ್ನ ಹಿಮ್ಮೆಟ್ಟಿಸಿದ್ದಾಳೆ. ಈ ವೇಳೆ ಅದು ಕಾಡಿನೊಳಗೆ ಓಡಿ ಹೋಗಿದೆ.
ಇದನ್ನೂ ಓದಿರಿ: ರವಿಶಾಸ್ತ್ರಿಗಿಂತಲೂ ರಾಹುಲ್ ಭಾಯ್ ತುಂಬಾ ಭಿನ್ನ, ಪ್ರೇರಣಾ ಶೈಲಿ ವಿಭಿನ್ನ ಎಂದ ಶಿಖರ್
ಘಟನೆಯಿಂದ ಮಗುವಿನ ಮುಖದ ಭಾಗಕ್ಕೆ ಗಾಯವಾಗಿದ್ದು, ನಾಗ್ಪುರ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಚಿಕಿತ್ಸೆ ನೀಡ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿಸಿದ್ದಾರೆ.