ಜನಗಾಂ(ತೆಲಂಗಾಣ): ಒಂದು ವರ್ಷದ ಮಗಳು ಚಲನೆ ಮತ್ತು ಮಾತನಾಡಲು ತೊಂದರೆ ಅನುಭವಿಸಬಹುದೆಂದು ತಿಳಿದು ತಾಯಿಯೊಬ್ಬಳು ಆಕೆಯನ್ನು ನೀರಿನ ತೊಟ್ಟಿಗೆ ಎಸೆದು ಕೊಲೆ ಮಾಡಿರುವ ಮನಕಲುಕುವ ಘಟನೆ ನಗರದಲ್ಲಿ ನಡೆದಿದೆ.
ಜನಗಾಂದ ಅಂಬೇಡ್ಕರ್‌ನಗರದ ನಡಿಗೋಟಿ ಭಾಸ್ಕರ್ ಮತ್ತು ಸ್ವಪ್ನಾ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಮಗು ನವನೀತ್ ಮತ್ತು ಎರಡನೇ ಮಗು ತೇಜಸ್ವಿನಿ. ಒಂದು ವರ್ಷದ ತೇಜಸ್ವಿನಿ ಚಲನೆ ಮತ್ತು ಮಾತಿನ ಕೊರತೆಯಿಂದ ಬಳಲುತ್ತಿದ್ದರು. ದಂಪತಿಗಳಿಬ್ಬರೂ ಆಸ್ಪತ್ರೆಗಳು ಸುತ್ತಿದ್ರೂ ಪ್ರಯೋಜನವಾಗಿರಲಿಲ್ಲ. ಭವಿಷ್ಯದಲ್ಲಿ ಮಗು ಚಲಿಸಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ದಂಪತಿಗೆ ಹೇಳಿದ್ದರು.
ಇನ್ನು ಮೊದಲನೇ ಮಗ ನವನೀತ್ ಹೃದಯದಲ್ಲಿ ರಂಧ್ರವಾಗಿದ್ದು, ಬೈಪಾಸ್ ಶಸ್ತ್ರಚಿಕಿತ್ಸೆಗೆ 8 ಲಕ್ಷ ರೂಪಾಯಿಗಳನ್ನು ಭಾಸ್ಕರ್ ಮತ್ತು ಸ್ವಪ್ನಾ ಖರ್ಚು ಮಾಡಿದ್ದರು. ಹುಟ್ಟಿದ ಮಕ್ಕಳಿಬ್ಬರೂ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ದಂಪತಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ನಮಗೆ ತೇಜಸ್ವಿನಿ ಭವಿಷ್ಯವೇ ಮುಂದಿನ ಜೀವನದಲ್ಲಿ ಹೊರೆಯಾಗಲಿದೆ ಎಂದು ಭಾವಿಸಿದ ಸ್ವಪ್ನಾ ಸೋಮವಾರ ಬೆಳಗ್ಗೆ 11 ಗಂಟೆಗೆ ಪತಿ ಇಲ್ಲದ ವೇಳೆ ಮನೆ ಎದುರಿನ ನೀರಿನ ತೊಟ್ಟಿಗೆ ಎಸೆದು ಸಾಯಿಸಿದ್ದರು.
ಇನ್ನು ಮಗು ಕೊಂದ ವಿಷಯ ನನ್ನ ಮೇಲೆ ಬಾರದಿರಲಿ ಎಂದು ಸ್ವಪ್ನಾ ಕಳ್ಳ ಈ ಕೆಲಸ ಮಾಡಿದ್ದಾನೆ ಎಂದು ನಂಬಿಸಲು ಯತ್ನಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ಮನೆಗೆ ನುಗ್ಗಿ ನನ್ನ ಬಂಗಾರದ ತಾಳಿಯನ್ನು ಕದಿಯಲು ಪ್ರಯತ್ನಿಸಿದ್ದನು. ನಾನು ತಾಳಿ ಕೊಡಲು ನಿರಾಕರಿಸಿದಾಗ ನನ್ನ ಮಗುವನ್ನು ಎತ್ತಿಕೊಂಡು ಮನೆ ಮುಂಭಾಗದ ನೀರಿನ ಟ್ಯಾಂಕ್‌ಗೆ ಎಸೆದನು ಎಂದು ಸ್ವಪ್ನಾ ಕಥೆ ಕಟ್ಟಿದ್ದಾರೆ.
ಜನಗಾಂ ಎಸಿಪಿ ಗಾಜಿ ಕೃಷ್ಣ, ಸಿಐ ಎಲಬೋಯಿನ ಶ್ರೀನಿವಾಸ್ ಸ್ವಪ್ನಾ ಹಾಗೂ ಆಕೆಯ ಪತಿ ಭಾಸ್ಕರ್ ಅವರನ್ನು ವಿಚಾರಣೆಗೊಳಪಡಿಸಿದರು. ಈ ಸಂದರ್ಭದಲ್ಲಿ ಸ್ವಪ್ನಾ ಮನಕಲಕುವ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ತನ್ನ ಮಗಳು ತೇಜಸ್ವಿನಿ ಅನಾರೋಗ್ಯದಿಂದ ಬಳಲುತ್ತಿದ್ದರು.
ಈ ಸಮಯದಲ್ಲಿ ಆಕೆಯನ್ನು ಬೆಳೆಸುವುದು ಹೊರೆಯಾಗಿತ್ತು ಎಂದು ಸ್ವಪ್ನಾ ತನ್ನ ನೋವನ್ನು ಬಹಿರಂಗಪಡಿಸಿದರು. ಅಷ್ಟೇ ಅಲ್ಲ ಸಂಬಂಧಿಕರ ನೇರ ಮಾತಗಳನ್ನು ಸಹಿಸಲಾಗದೇ ಮಗುವಿನ ಪ್ರಾಣವನ್ನೇ ತೆಗೆದಿರುವುದಾಗಿ ಹೇಳಿದ್ದಾರೆ.
ಸ್ವಪ್ನಾ ಅವರ ತಪ್ಪೊಪ್ಪಿಗೆಯನ್ನು ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಸ್ವಪ್ನಾ ಅವರನ್ನು ಬಂಧಿಸಿ ರಿಮಾಂಡ್‌ಗೆ ಕರೆದೊಯ್ಯಲಾಗಿದೆ ಎಂದು ಡಿಸಿಪಿ ಸೀತಾರಾಮ್ ತಿಳಿಸಿದ್ದಾರೆ. ತೇಜಸ್ವಿ ಅವರ ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಭಾಸ್ಕರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಓದಿ: ರಾಮನಗರ: ಅಪಘಾತದಲ್ಲಿ ಮಗು ಸಾವು, ತಂದೆ-ತಾಯಿ ಸೇರಿ ಮೂವರಿಗೆ ಗಾಯ