ವಯನಾಡು(ಕೇರಳ): ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ಸಂಘಟನೆ ನಾಯಕಿಯ ಹತ್ಯೆಯಾಗಿದೆ ಎಂಬ ಪೋಸ್ಟರ್‌ಗಳು ಕಂಡುಬಂದಿವೆ. ಕಣ್ಣೂರು-ವಯನಾಡು ಗಡಿಯ ಅರಳಂ ಅರಣ್ಯ ಪ್ರದೇಶದಲ್ಲಿ ಕಳೆದ ತಿಂಗಳು ಪೊಲೀಸರು ಹಾಗೂ ಮಾವೋವಾದಿಗಳ ಮಧ್ಯೆ ಎನ್‌ಕೌಂಟರ್ ಜರುಗಿದೆ ಎಂದು ಹೇಳಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ ಸಾವು: ಆಂಧ್ರಪ್ರದೇಶದ ಲಕ್ಷ್ಮೀ ಅಲಿಯಾಸ್ ಕವಿತಾ ಮೃತ ಮಾವೋವಾದಿ. ನವೆಂಬರ್ 13ರಂದು ಅಯ್ಯನ್‌ಕುನ್ನು ಎಂಬಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಈಕೆ ಗಂಭೀರವಾಗಿ ಗಾಯಗೊಂಡಿದ್ದಳು. ಬಳಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಪಶ್ಚಿಮ ಘಟ್ಟದ ಅರಣ್ಯದಲ್ಲಿ ಕವಿತಾ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ. ತಮ್ಮ ನಾಯಕಿಯ ಸಾವಿಗೆ ಮಾವೋವಾದಿ ಗುಂಪು ಸೇಡು ತೀರಿಸಿಕೊಳ್ಳಲು ಹೊರಟಿದೆ ಎಂದು ಪೋಸ್ಟರ್‌ಗಳಲ್ಲಿ ಎಚ್ಚರಿಸಲಾಗಿದೆ.
ಮೂಲಗಳ ಪ್ರಕಾರ, ನ.13ರಂದು ಬೆಳಿಗ್ಗೆ ಅಯ್ಯನ್‌ಕುನ್ನುವಿನಲ್ಲಿ ಪೊಲೀಸ್ ಇಲಾಖೆಯ ಥಂಡರ್ ಬೋಲ್ಟ್ ಕಮಾಂಡೋ ಪಡೆ ಶೋಧ ಕೈಗೊಂಡಿತ್ತು. ಈ ವೇಳೆ, ಮಾವೋವಾದಿ ಗಂಪೊಂದು ಮೊದಲು ಗುಂಡಿನ ದಾಳಿ ನಡೆಸಿತ್ತು. ತಕ್ಷಣವೇ ಥಂಡರ್ ಬೋಲ್ಟ್ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದರು. ಇದಾದ ಬಳಿಕ ಅಂದೇ ಘಟನೆಯನ್ನು ಖಚಿತಪಡಿಸಿದ್ದ ಡಿಐಜಿ ಪುಟ್ಟ ವಿಮಲಾದಿತ್ಯ, ಅರಳಂ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೆಲ ಮಾವೋವಾದಿಗಳು ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿಯ ಬಳಿಕ ಪೊಲೀಸರು ಬಂದೂಕುಗಳು ಸೇರಿದಂತೆ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಇಬ್ಬರನ್ನು ವಶಕ್ಕೆ ಪಡೆದಿದ್ದ ಕಮಾಂಡೋ ಪಡೆ: ಈ ಘಟನೆಗೂ ಮುನ್ನ ಅಂದರೆ, ನ.7ರಂದು ಇದೇ ವಯನಾಡು-ಕಣ್ಣೂರು ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ಜರುಗಿದ ಬಗ್ಗೆ ವರದಿಯಾಗಿತ್ತು. ಅಂದು ರಾತ್ರಿ ಚಪ್ಪರ ಕಾಲೊನಿಯ ಮನೆಯೊಂದರಿಂದ ಆಹಾರ ತೆಗೆದುಕೊಂಡು ಹೋಗಲು ಮಾವೋವಾದಿ ಗುಂಪು ಬಂದಿತ್ತು. ಆಗ ಥಂಡರ್ ಬೋಲ್ಟ್ ಕಮಾಂಡೋ ಪಡೆ ಅವರನ್ನು ಸುತ್ತುವರೆದಿತ್ತು. ಈ ಸಂದರ್ಭದಲ್ಲಿ ಶರಣಾಗುವಂತೆ ಸೂಚಿಸಿದರೂ ನಿರಾಕರಿಸಿದ ಕಾರಣ ಗುಂಡಿನ ದಾಳಿ ನಡೆಸಲಾಗಿತ್ತು. ಇದರಿಂದಾಗಿ ಸುಮಾರು ಎರಡೂ ಕಡೆಗಳಿಂದಲೂ ಅರ್ಧ ಗಂಟೆ ಗುಂಡಿನ ಚಕಮಕಿ ನಡೆದಿತ್ತು.
ಈ ಮಾವೋವಾದಿಗಳ ಗುಂಪಿನಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಇದ್ದರು ಎನ್ನಲಾಗಿತ್ತು. ಇದರಲ್ಲಿ ಓರ್ವ ಪುರುಷ ಮತ್ತು ಮಹಿಳೆಯನ್ನು ಕಮಾಂಡೋಗಳು ವಶಕ್ಕೆ ಪಡೆದಿದ್ದವು. ಅಲ್ಲದೇ, ಪೆರಿಯಾ ಅರಣ್ಯ, ತಲಪುಳ, ಮಖಿಮಲ ಮತ್ತು ಅರಳಂ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಕಾರ್ಯಾಚರಣೆ ಕೈಗೊಂಡಿದ್ದರು.
ಇದನ್ನೂ ಓದಿ: ವಯನಾಡಿನಲ್ಲಿ ಪೊಲೀಸರು-ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ: ಇಬ್ಬರು ವಶಕ್ಕೆ