ಫುಲ್ಬಾನಿ(ಒಡಿಶಾ): ಇಲ್ಲಿನ ಸಿಂಧಿ ಅರಣ್ಯದಲ್ಲಿ ಮಂಗಳವಾರ ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಮಹಿಳಾ ಮಾವೋವಾದಿಯೊಬ್ಬರು ಜೀವ ತೆತ್ತಿದ್ದಾರೆ. ಮಾವೋವಾದಿಗಳು ಈ ಪ್ರದೇಶದಲ್ಲಿ ಉಳಿದುಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದಾಗ ಈ ಘಟನೆ ನಡೆದಿದೆ.
ಸಿಂಧಿ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳ ಕ್ಯಾಂಪ್ ಹೂಡಿದ್ದಾರೆ ಎಂಬ ಸುಳಿವಿನ ಮೇರೆಗೆ ಎಸ್‌ಒಜಿ ಮತ್ತು ಡಿವಿಎಫ್ ಜವಾನರು ಕಂಧಮಾಲ್‌ನ ಬಲಿಗುಡಾ ಸಿಂಧಿ ಅರಣ್ಯದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಎಸ್‌ಒಜಿ ಪಡೆ ಮತ್ತು ಮಾವೋವಾದಿಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಚಕಮಕಿಯ ವೇಳೆ ಮಹಿಳಾ ನಕ್ಸಲ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಮಾವೋವಾದಿಗಳು ಅಲ್ಲಿಂದ ಕಾಲ್ಕಿತ್ತ ಬಳಿಕ ಎಸ್‌ಒಜಿ ಪಡೆ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದಾಗ ಬಂದೂಕು ಸಹಿತ ಮಹಿಳಾ ಮಾವೋವಾದಿಯ ಶವ ಪತ್ತೆಯಾಗಿದೆ. 20 ಕ್ಕೂ ಹೆಚ್ಚು ಮಾವೋವಾದಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.