ಸೋಪೋರ್(ಜಮ್ಮು): ಬುರ್ಖಾ ಧರಿಸಿದ್ದ ಮಹಿಳೆಯೋರ್ವಳು ಸಿಆರ್ಪಿಎಫ್ನ ಶಿಬಿರದ ಮೇಲೆ ಬಾಂಬ್ ಎಸೆದು ಪರಾರಿಯಾಗಿರುವ ಘಟನೆ ನಡೆದಿದೆ. ಈ ದುಷ್ಕೃತ್ಯದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಕಳೆದ ಕೆಲ ತಿಂಗಳಲ್ಲಿ ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಸಿಆರ್ಪಿಎಫ್, ಪೊಲೀಸ್ ಪಡೆ ಮೇಲೆ ಮೇಲಿಂದ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಖುರ್ಖಾ ಹಾಕಿಕೊಂಡಿದ್ದ ಮಹಿಳೆಯೋರ್ವಳು ಸಿಆರ್ಪಿಎಫ್ನ ಬಂಕ್ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾಳೆ. ಘಟನೆಯಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದ್ದು, ಆರೋಪಿಯ ಬಂಧನಕ್ಕೆ ಶೋಧಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: 2 ತಿಂಗಳಲ್ಲಿ 7 ಸಲ ನವಜಾತ ಹೆಣ್ಣು ಶಿಶು ಮಾರಾಟ: ಕೊನೆಗೂ ಅಮ್ಮನ ಮಡಿಲು ಸೇರಿದ್ದೊಂದು ರೋಚಕ ಕಥೆ!
ಮಂಗಳವಾರ ರಾತ್ರಿ 7ಗಂಟೆಗೆ ಈ ಘಟನೆ ನಡೆದಿದ್ದು, ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುರ್ಖಾ ಹಾಕಿಕೊಂಡಿದ್ದ ಮಹಿಳೆ ಚೀಲದಿಂದ ಬಾಂಬ್ ಹೊರತೆಗೆದು ಸಿಆರ್ಪಿಎಫ್ ಶಿಬಿರದತ್ತ ಎಸೆದಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಈ ಪ್ರದೇಶದಲ್ಲಿ ಶೋಧಕಾರ್ಯ ಮುಂದುವರೆಸಲಾಗಿದ್ದು, ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.