ಮೀರತ್ (ಉತ್ತರಪ್ರದೇಶ): ಮಹಿಳೆಯೊಬ್ಬರ ಹೃದಯ ಬರೋಬ್ಬರಿ 210 ನಿಮಿಷಗಳ ಕಾಲ ನಿಂತರೂ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಮೀರತ್‌ನ ಲಾಲಾ ಲಜಪತ್ ರಾಯ್ ಮೆಮೋರಿಯಲ್ ವೈದ್ಯಕೀಯ ಕಾಲೇಜಿನ ವೈದ್ಯರು ಅವರ ಪ್ರಾಣ ಉಳಿಸಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸುವಾಗ ಹೃದಯ ಹೈಟೆಕ್ ಯಂತ್ರದ ಸಹಾಯದಿಂದ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.
ಆಪರೇಷನ್ ಮಾಡುವಾಗ ಮೂರು ನಿಮಿಷಗಳ ಕಾಲ ಮೆದುಳಿಗೆ ರಕ್ತ ಪೂರೈಕೆ ಆಗಿಲ್ಲ. ಈ ವೇಳೆ ಮೆದುಳು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇರುತ್ತದೆ. ಈ ಮೂರು ನಿಮಿಷ ತುಂಬಾ ಅಮೂಲ್ಯವಾಗಿದ್ದು, ಈ ವೇಳೆ ಸಾವು- ಬದುಕು ನಿರ್ಧಾರವಾಗುತ್ತದೆ. ಮೀರತ್‌ನ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ಬಾರಿಗೆ ಇಂತಹ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಲ್ಲದೇ ಇದರ ವೆಚ್ಚ ಕೂಡ ಕಡಿಮೆ ಇದೆ.
34 ವರ್ಷದ ಕವಿತಾ ಎಂಬುವರಿಗೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯಕೀಯ ಕಾಲೇಜಿನ ಮಾಧ್ಯಮ ಪ್ರಭಾರಿ ಡಾ. ವಿ.ಡಿ. ಪಾಂಡೆ ತಿಳಿಸಿದ್ದಾರೆ. ಕವಿತಾ ಅವರು ಕಳೆದ ಎರಡು ವರ್ಷಗಳಿಂದ ಅಸಹಜ ಹೃದಯ ಬಡಿತ ಮತ್ತು ಎದೆ ನೋವಿನಿಂದ ಬಳಲುತ್ತಿದ್ದರು. ಹಲವು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಲೋಚನೆ ನಡೆಸಿದರೂ, ಚಿಕಿತ್ಸೆ ಮಾತ್ರ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಶಸ್ತ್ರ ಚಿಕಿತ್ಸೆ ಇಲ್ಲದೆ 104 ವರ್ಷದ ವ್ಯಕ್ತಿಯ ಹೃದಯ ಕವಾಟ ಬದಲಾವಣೆ; ವೈದ್ಯರ ಸಾಧನೆ
ನಂತರ ಅವರು ಮೀರತ್ ವೈದ್ಯಕೀಯ ಕಾಲೇಜಿನ ಕಾರ್ಡಿಯೋ ಥೋರಾಸಿಕ್ ಸರ್ಜರಿ OPD ಯಲ್ಲಿ ಸಮಾಲೋಚಿಸಿದರು. ಪರೀಕ್ಷೆ ಮಾಡಿದಾಗ ರೋಗಿಯ ಮಿಟ್ರಲ್ ವಾಲ್ವ್ ಹಾನಿಗೊಳಗಾಗಿರುವುದು ಕಂಡುಬಂದಿದೆ. ಹಾಗಾಗಿ ಮಿಟ್ರಲ್ ಕವಾಟವನ್ನು ಬದಲಿಸಲು ರೋಗಿಗೆ ಶಸ್ತ್ರಚಿಕಿತ್ಸೆಯ ಸಲಹೆ ನೀಡಲಾಯಿತು. ಡಾ. ರೋಹಿತ್ ಕುಮಾರ್ ಚೌಹಾಣ್, ಕಾರ್ಡಿಯೋ ಥೋರಾಸಿಕ್ ಸರ್ಜರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮತ್ತು ಅವರ ತಂಡ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದೆ.