ಅಲ್ವಾಲ್ (ತೆಲಂಗಾಣ): ಈ ಹಿಂದೆ ಹುಟ್ಟಿದ ಶಿಶುಗಳ ಸಾವಿನಿಂದ ಮನನೊಂದ ಮಹಿಳೆಯೊಬ್ಬರು ಅವಳಿ ಶಿಶುಗಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಫೆ.19 ಮತ್ತು 20ರ ಮಧ್ಯರಾತ್ರಿ ಸಿಕಂದರಾಬಾದ್‌ನ ಅಲ್ವಾಲ್ ಪ್ರದೇಶದ ಶಿವನಗರದಲ್ಲಿ ನಡೆದಿದೆ. ನರಸಿಂಗ ರಾವ್ ಎಂಬವರ ಪತ್ನಿ ಸಂಧ್ಯಾ ರಾಣಿ (29) ಮೃತರು. ಭಾನುವಾರ ರಾತ್ರಿ ಪತಿ ಗಾಢನಿದ್ದೆಯಲ್ಲಿದ್ದಾಗ ಎದ್ದಿರುವ ಪತ್ನಿ ಮನೆ ಆವರಣದಲ್ಲಿರುವ ನೀರಿನ ತೊಟ್ಟಿಗೆ ಶಿಶುಗಳನ್ನು ಎಸೆದು, ನಂತರ ತಾನೂ ಹಾರಿ ಸಾವಿಗೀಡಾಗಿದ್ದಾರೆ.
ಪತಿ ಬೆಳಗ್ಗೆದ್ದು ನೋಡಿದಾಗ ಪತ್ನಿ, ಮಕ್ಕಳು ಕಾಣಲಿಲ್ಲ. ಆತಂಕಗೊಂಡು ಮನೆ ಆವರಣದಲ್ಲಿ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ನೀರಿನ ತೊಟ್ಟಿಯಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶಿಶುಗಳ ಆರೋಗ್ಯ ಸ್ಥಿತಿ ನನ್ನನ್ನು ತೀವ್ರವಾಗಿ ಕಾಡುತ್ತಿದೆ ಎಂದು ಮಹಿಳೆ ಬರೆದಿರುವ ಸೂಸೈಡ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.11 ರಂದು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಅವಳಿ ಶಿಶುಗಳಿಗೆ ಜನ್ಮ ನೀಡಿದ್ದರು. ಐಸಿಯುನಲ್ಲಿದ್ದ ನವಜಾತ ಶಿಶುಗಳು ಕಡಿಮೆ ದೇಹ ತೂಕ ಹೊಂದಿದ್ದರಿಂದ, ಈ ಹಿಂದೆ ನಡೆದಂತೆ ಈ ಶಿಶುಗಳೂ ಸಾಯುತ್ತವೆ ಎಂಬ ಭಯದಿಂದ ಮಹಿಳೆ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.
2017ರಲ್ಲಿ ಜನಿಸಿದ್ದ ಶಿಶುಗಳು ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದು ಮಹಿಳೆ ಆಘಾತಕ್ಕೆ ಒಳಗಾಗಿದ್ದರು. ಆಗ ಜನಿಸಿದ ಅವಳಿಗಳ ಒಂದು ಮಗು ಹುಟ್ಟುವಾಗಲೇ ಅಂಗವೈಕಲ್ಯತೆ ಹೊಂದಿತ್ತು ಎಂದು ವೈದ್ಯರು ತಿಳಿಸಿದ್ದರು. ಎರಡನೇ ಶಿಶುವಿನ ಹೃದಯದಲ್ಲಿ ರಂಧ್ರವಿತ್ತು. ಹುಟ್ಟಿದ ಒಂದೇ ವಾರದಲ್ಲಿ ಈ ಎರಡೂ ಮಕ್ಕಳು ತೀರಿಕೊಂಡಿದ್ದವು.
2018ರಲ್ಲಿ ಮತ್ತೆ ಗರ್ಭ ಧರಿಸಿದ ಸಂಧ್ಯಾ ರಾಣಿಗೆ ಗರ್ಭಪಾತವಾಗಿದೆ. ಸಾಲು ಸಾಲು ದುರಂತಗಳು ಆಕೆಯನ್ನು ಮಾನಸಿಕವಾಗಿ ಜರ್ಜರಿತಗೊಳಿಸಿದ್ದವು. ಇತ್ತೀಚಿಗೆ ಜನಿಸಿದ ಅವಳಿ ಶಿಶುಗಳನ್ನು ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಿದ ನಂತರ ಈ ಶಿಶುಗಳೂ ಬದುಕುಳಿಯುವುದಿಲ್ಲ ಎಂದು ಹೆದರಿ ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಹೆಂಡತಿ ಮನೆಗೆ ಹೋಗಿದ್ದ ಗಂಡ ಸಾವು: ಪತ್ನಿ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ