ಮೈನಾ (ಪಶ್ಚಿಮಬಂಗಾಳ): ತನ್ನ ಮಾತು ಕೇಳಲಿಲ್ಲವೆಂದು ಪತ್ನಿ ತನ್ನ ಪತಿಯನ್ನು ನಿಂದಿಸುತ್ತಿದ್ದಳು. ಗಂಡ ಹೆಂಡಿರ ಜಗಳವನ್ನು ಸಮಾಧಾನ ಮಾಡಲು ಹೋದ ಮಾವನಿಗೆ ಸೊಸೆ ನರಕ ತೋರಿಸಿದ್ದಾಳೆ. ಬುದ್ಧಿವಾದ ಹೇಳಿದ ಮಾವನ ವೃಷಣಗಳಿಗೆ ಸೊಸೆ ಹೊಡೆದು ಹಿಂಸಿಸಿದ್ದಾರೆ. ಈ ವಿಚಿತ್ರ ಘಟನೆ ವರದಿಯಾಗಿದ್ದು ಪಶ್ಚಿಮಬಂಗಾಳದಲ್ಲಿ. ಮಾವನ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಅತ್ತೆ ನೀಡಿದ ದೂರಿನ ಮೇರೆಗೆ ಸೊಸೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಏನಾಯ್ತು?: ಪತ್ನಿಯ ಮಾತನ್ನೂ ಲೆಕ್ಕಿಸದೇ ಮಾಂಸ ತರಲು ಪತಿ ಮಾರುಕಟ್ಟೆಗೆ ತೆರಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪತ್ನಿ ಒಂದೇ ಸಮನೆ ಗಂಡನನ್ನು ನಿಂದಿಸುತ್ತಾ ಇದ್ದಳು. ಹೀಗೆ ಮಾಡಬೇಡ ಎಂದು ಹೇಳಲು ಹೋದ ಮಾವನ ಜೊತೆ ಮಹಿಳೆ ಕಾದಾಟಕ್ಕಿಳಿದಿದ್ದಾಳೆ. ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ ಸೊಸೆ ಮಾವನ ಆ ಜಾಗಕ್ಕೆ ಕಾಲಿನಿಂದ ಒದ್ದಿದ್ದಾಳೆ. ಅಷ್ಟಕ್ಕೆ ಬಿಡದ ಆಕೆ ಮಾವನನ್ನು ನೆಲಕ್ಕೆ ಕೆಡವಿ ಕಾಲಿನಿಂದ ಸೂಕ್ಷ್ಮ ಜಾಗವನ್ನು ತುಳಿದಿದ್ದಾಳೆ. ಇದರಿಂದ ವಯಸ್ಸಾದ ಮಾವ ನೋವಿನಿಂದ ಕಿರುಚಾಡಿದ್ದಾರೆ.
ತವರಿಗೆ ಓಡಿ ಹೋದ ಮಹಿಳೆ: ನೋವಿನಿಂದ ಕಿರುಚುತ್ತಾ ಒದ್ದಾಡುತ್ತಿದ್ದಾಗ ಅಲ್ಲಿಗೆ ಬಂದ ನೆರೆಹೊರೆಯವರು ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಂಡನ ಕಾರಣಕ್ಕಾಗಿ ವಯಸ್ಸಾದ ಮಾವನ ಮೇಲೆ ಹಲ್ಲೆ ಮಾಡಿ, ವೃಷಣಗಳಿಗೆ ಒದ್ದು ಹಿಂಸಿಸಿದ ಮಹಿಳೆಯನ್ನು ಮನೆಯಲ್ಲಿ ಕಟ್ಟಿ ಹಾಕಿದ್ದಾರೆ. ಆದರೆ, ಚಾಲಾಕಿ ಹೆಂಗಸು ಅಲ್ಲಿಂದ ಯಾರಿಗೂ ಗೊತ್ತಾಗದ ಹಾಗೆ ತಪ್ಪಿಸಿಕೊಂಡು ತವರು ಮನೆಗೆ ಪರಾರಿಯಾಗಿದ್ದಾಳೆ. ಸೂಕ್ಷ್ಮ ಜಾಗಕ್ಕೆ ಪೆಟ್ಟು ಬಿದ್ದು ನಲುಗುತ್ತಿರುವ ಮುದಿ ವಯಸ್ಸಿನ ಮಾವ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಸೊಸೆಯ ಈ ಘೋರ ಕೃತ್ಯದ ವಿರುದ್ಧ ಅತ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಆಕೆಯ ತವರು ಮನೆಯಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಬಂಧನಕ್ಕೆ ನೀಡಲಾಗಿದೆ. ಮಗನ ನಿಂದಿಸುತ್ತಿದ್ದ ಕಾರಣ ಬುದ್ಧಿ ಹೇಳಲು ಹೋಗಿದ್ದಕ್ಕೆ ಮಾವನ ಜೊತೆಗೆ ಕೆಟ್ಟದಾಗಿ ನಡೆದುಕೊಂಡು ಹಲ್ಲೆ ಮಾಡಿ ಆ ಜಾಗಕ್ಕೆ ಒದ್ದ ಸೊಸೆಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅತ್ತೆ ದೂರಿನಲ್ಲಿ ಒತ್ತಾಯಿಸಿದ್ದಾರೆ. ಮಾವನ ಆ ಜಾಗಕ್ಕೆ ಒದ್ದ ಸೊಸೆಯ ಕೃತ್ಯ ಅಚ್ಚರಿ ಉಂಟು ಮಾಡಿದೆ.
ಓದಿ: ಸಾರಿಗೆ ಬಸ್ - ಕಾರು ನಡುವೆ ಮುಖಾಮುಖಿ ಡಿಕ್ಕಿ: ಕಾರಿನಲ್ಲಿದ್ದ ಐವರು ಯುವಕರ ದಾರುಣ ಸಾವು