ಪಾಣಿಪತ್ (ಹರಿಯಾಣ) : ಸೂಟ್‌ಕೇಸ್‌ನಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಪಾಣಿಪತ್‌ನಲ್ಲಿ ನಡೆದಿದೆ. ಈ ಮೃತದೇಹವು ಪಾಣಿಪತ್‌ನ ಸಿವಾಹ್ ಗ್ರಾಮದ ಬಳಿ ರೋಹ್ಟಕ್ ರಾಷ್ಟ್ರೀಯ ಹೆದ್ದಾರಿಯ ಗ್ರಿಲ್ ಬಳಿ ಪತ್ತೆಯಾಗಿದೆ. ಮಹಿಳೆಯ ವಯಸ್ಸು ಸುಮಾರು 50 ವರ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಎಫ್‌ಎಸ್‌ಎಲ್ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ರೋಹ್ಟಕ್ ಹೆದ್ದಾರಿಯಲ್ಲಿ ಈ ಸೂಟ್‌ಕೇಸ್ ಅನ್ನು ದಾರಿಹೋಕರು ನೋಡಿದ್ದಾರೆ. ಸೂಟ್‌ಕೇಸ್‌ನ ಗಾತ್ರವು ದೊಡ್ಡದಾಗಿರುವುದನ್ನು ಅವರು ಗಮನಿಸಿದ್ದಾರೆ. ಹೀಗಾಗಿ ದಾರಿಹೋಕರಿಗೆ ಅನುಮಾನ ಶುರುವಾಗಿದೆ. ನಂತರ ಪ್ರಯಾಣಿಕರು 112 ನಂಬರ್ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಸೂಟ್‌ಕೇಸ್ ತೆರೆದಾಗ ಒಳಗೆ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೃತದೇಹ ಪತ್ತೆಯಾದ ತಕ್ಷಣ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ
ಇದನ್ನೂ ಓದಿ : ಗಡಿರೇಖೆಗಳಿಂದ ಬೇರ್ಪಟ್ಟ ಕುಟುಂಬವು ತಂತ್ರಜ್ಞಾನದ ಸಹಾಯದಿಂದ ಒಂದಾಗಿದ್ದು ಹೇಗೆ..?
ಸದ್ಯ ಎಫ್‌ಎಸ್‌ಎಲ್ ತಂಡವು ಸ್ಥಳದಿಂದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಮಹಿಳೆಯ ಗುರುತು ಕೂಡಾ ಪತ್ತೆಯಾಗಿಲ್ಲ. ಮಹಿಳೆಯ ತಲೆಯ ಮೇಲಿನ ಬಿಳಿ ಕೂದಲು ನೋಡಿ ಮಹಿಳೆಯ ವಯಸ್ಸು ಸುಮಾರು 50 ವರ್ಷ ಎಂದು ಅಂದಾಜಿಸಲಾಗಿದೆ. ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿ ಸೂಟ್‌ಕೇಸ್‌ನಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಮಹಿಳೆಯ ಮೃತದೇಹವನ್ನು ಪಾಣಿಪತ್ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಈಗಾಗಲೇ ಮಹಿಳೆಯ ಕುಟುಂಬದ ಸದಸ್ಯರಿಗಾಗಿ ಶೋಧ ಕಾರ್ಯವೂ ಆರಂಭವಾಗಿದೆ.
ಇದನ್ನೂ ಓದಿ : ದೆಹಲಿ ಲಿಕ್ಕರ್ ಹಗರಣ: ಅರುಣ್ ಪಿಳ್ಳೈಯನ್ನು ಮಾ.13ರ ವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದ ಕೋರ್ಟ್
ಪ್ರಕರಣದ ಬಗ್ಗೆ ಎಎಸ್ಪಿ ಮಯಾಂಕ್ ಮಿಶ್ರಾ ಮಾತನಾಡಿದ್ದು, 'ಮಹಿಳೆ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಹಿಳೆಯ ವಯಸ್ಸು 45 ರಿಂದ 50 ರ ನಡುವೆ ಇದೆ ಎಂದು ಅಂದಾಜಿಸಲಾಗಿದೆ. ಶವ ಸಿಕ್ಕಾಗ ಮಹಿಳೆಯ ಕೈ ಕಾಲುಗಳನ್ನು ಕಟ್ಟಿ ಬಾಯಿಗೆ ಟೇಪ್ ಅಂಟಿಸಲಾಗಿತ್ತು. ಮೇಲ್ನೋಟಕ್ಕೆ 8 ರಿಂದ 10 ಗಂಟೆಗಳಷ್ಟು ಹಿಂದೆಯಷ್ಟೇ ಈ ಕೊಲೆ ನಡೆದಿರಬಹುದು ಹಾಗೂ ಯಾರೋ ಕೊಲೆ ಮಾಡಿ ಕಪ್ಪು ಸೂಟ್‌ಕೇಸ್‌ನಲ್ಲಿ ಮೃತದೇಹವನ್ನು ಎಸೆದಿದ್ದಾರೆ ಎಂದು ತೋರುತ್ತದೆ. ಈ ಮಹಿಳೆ ಯಾರು ಎಂದು ಇಲ್ಲಿಯವರೆಗೂ ಗುರುತಿಸಲಾಗಿಲ್ಲ. ಸದ್ಯ ಘಟನಾ ಸ್ಥಳದಿಂದ ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದ್ದು, ಸದ್ಯದಲ್ಲೇ ಈ ಕೊಲೆಗೆ ಸಂಬಂಧಿಸಿದಂತೆ ಸತ್ಯ ಬಯಲಾಗಲಿದೆ' ಎಂದಿದ್ದಾರೆ.
ಇದನ್ನೂ ಓದಿ : ಅಜ್ನಾಲಾ ಹಿಂಸಾತ್ಮಕ ಘರ್ಷಣೆ: ಅಮೃತಪಾಲ್ ಸಿಂಗ್ ಒಂಬತ್ತು ಸಹಚರರ ಶಸ್ತ್ರಾಸ್ತ್ರ ಪರವಾನಗಿ ರದ್ದು..!