ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದ ಟಿಕ್ರಿ ಗಡಿಯಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ತನಿಖೆ ನಡೆಸುವುದಾಗಿ ಹರಿಯಾಣದ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಪಶ್ಚಿಮ ಬಂಗಾಳದ ಮಹಿಳಾ ಹೋರಾಟಗಾರ್ತಿಯೊಬ್ಬರ ಮೇಲೆ ಟಿಕ್ರಿ ಗಡಿಯಲ್ಲಿ ಕೆಲವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಒಂದು ವಾರದ ನಂತರ ಮಹಿಳೆಗೆ ಜ್ವರ ಬಂದಿದ್ದು, ಕೋವಿಡ್ ವರದಿ ಪಾಸಿಟಿವ್ ಬಂದಿತ್ತು. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಏಪ್ರಿಲ್ 30 ರಂದು ಅವರು ವೈರಸ್ಗೆ ಬಲಿಯಾಗಿದ್ದರು.
ಇದನ್ನೂ ಓದಿ: ಅತ್ಯಾಚಾರ ಕೇಸ್ ಹಿಂಪಡೆಯಲು ₹20 ಲಕ್ಷಕ್ಕೆ ಬೇಡಿಕೆ : ಮಾಡೆಲ್ ಸೇರಿ ಇಬ್ಬರ ಬಂಧನ
ಮಹಿಳೆ ಸಾಯುವ ಹಿಂದಿನ ದಿನ ಅವರ ತಂದೆ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ, ಮಹಿಳೆ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದನ್ನು ಅಪ್ಪನ ಹೇಳಿಕೊಂಡಿದ್ದರು. ಮೇ 8ರಂದು ಸಂತ್ರಸ್ತೆಯ ತಂದೆ ಇಬ್ಬರು ವ್ಯಕ್ತಿಗಳ ವಿರುದ್ಧ ಘಟನೆ ಸಂಬಂಧ ಎಫ್ಐಆರ್ ದಾಖಲಿಸಿದ್ದು, ಹರಿಯಾಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈತ ಮುಖಂಡ ಯೋಗೇಂದ್ರ ಯಾದವ್, ಟಿಕ್ರಿ ಗಡಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಕೆಲ ರೈತ ಮುಖಂಡರಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಈ ವರದಿಗಳು ನಿಜವೆಂದು ನಾನು ಹೇಳಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದನ್ನು ಸಂಯುಕ್ತಾ ಕಿಸಾನ್ ಮೋರ್ಚಾ ಖಂಡಿಸುತ್ತದೆ. ಈ ಆರೋಪ ಸಂಬಂಧ ಸೂಕ್ತ ತನಿಖೆ ಮಾಡುತ್ತೇವೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.