ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರ ಅಂತ್ಯಕ್ಕೆ ಕೇವಲ ಒಂದು ವಾರವಷ್ಟೇ ಬಾಕಿಯಿದ್ದು, ಇಂದಿನಿಂದ ರಾಷ್ಟ್ರೀಯ ನಾಯಕರು ದೇವರನಾಡಿನಲ್ಲಿ ಮತದಾರರನ್ನು ಸೆಳೆಯಲು ಅಂತಿಮ ಕಸರತ್ತು ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರು ಪ್ರಚಾರ ಕೈಗೊಳ್ಳಲಿದ್ದಾರೆ.
ಪ್ರಧಾನಿ ಮೋದಿ ಇಂದು ಪಾಲಕ್ಕಾಡ್ಗೆ ಆಗಮಿಸಲಿದ್ದಾರೆ. ಏಪ್ರಿಲ್ 2ರಂದು ಕೊನ್ನಿ ಮತ್ತು ತಿರುವನಂತಪುರಂನಲ್ಲಿ ಪ್ರಚಾರ ಕೈಗೊಳ್ಳುವವರು. ಅಲ್ಲದೇ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಮತಬೇಟೆ ನಡೆಸಲಿದ್ದಾರೆ.
ಇಂದು ಪ್ರಿಯಾಂಕಾ ಗಾಂಧಿ ಕೇರಳಕ್ಕೆ ಆಗಮಿಸಲಿದ್ದು, ತಿರುವನಂತಪುರಂ, ಕೊಲ್ಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈಗಾಗಲೇ ಎರಡು ಸುತ್ತಿನ ಪ್ರಚಾರ ಅಭಿಯಾನ ನಡೆಸಿದ್ದು, ಏಪ್ರಿಲ್ 3 ಮತ್ತು 4ರಂದು ವಯನಾಡು ಮತ್ತು ಕೊಜಿಕ್ಕೋಡ್ ಜಿಲ್ಲೆಗಳಿಗೆ ಬರುತ್ತಿದ್ದಾರೆ.
ಸಿಪಿಎಂ ಮುಖ್ಯ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ರಾಷ್ಟ್ರೀಯ ನಾಯಕರಾದ ಪ್ರಕಾಶ್ ಕಾರಟ್ ಮತ್ತು ಬೃಂದಾ ಕಾರಟ್ ಕೂಡ ಕೇರಳದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಕೂಡ ಮತಯಾಚನೆ ಮುಂದುವರೆಸಲಿದ್ದಾರೆ.
ಆಳ ಸಮುದ್ರದ ಮೀನುಗಾರಿಕೆ, ನಕಲಿ ಮತಗಳು, ಆಹಾರ ಕಿಟ್ಗಳು ಮತ್ತು ಚಿನ್ನದ ಕಳ್ಳಸಾಗಣೆ ಸೇರಿದಂತೆ ಅನೇಕ ವಿಷಯಗಳು ಕಳೆದ ವಾರದಲ್ಲಿ ಪ್ರಚಾರದ ಪ್ರಮುಖ ವಿಷಯಗಳಾಗಿದ್ದವು. ಶಬರಿಮಲೈ ವಿಚಾರವೂ ಕೂಡ ಚುನಾವಣೆ ಕೇಂದ್ರ ಬಿಂದುವಾಗಿದೆ.