ನವದೆಹಲಿ: ಬೆಲೆ ಏರಿಕೆಯ ಬಿಸಿ ಹೆಚ್ಚುತ್ತಲೇ ಇದೆ. ದೇಶದಲ್ಲಿ ಬೆಲೆ ಏರಿಕೆ ನಿರಂತರವಾಗಿದ್ದು, ಅದರ ಬಿಸಿ ಪ್ರತಿದಿನವೂ ತಟ್ಟುತ್ತಿರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಗುರುವಾರ ಪ್ರತಿ ಕೆಜಿ ಸಿಎನ್ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಬೆಲೆ 2.50 ರೂ. ಹೆಚ್ಚಳವಾಗಿದೆ. ಈ ಮೂಲಕ ಕಳೆದ ಆರು ದಿನಗಳಲ್ಲಿ ಒಟ್ಟಾರೆ 9.10 ರೂ.ನಷ್ಟು ಏರಿಕೆಯಾದಂತಾಗಿದೆ.
ಬುಧವಾರ ಕೂಡ ಪ್ರತಿ ಕೆಜಿ ಸಿಎನ್ಜಿ ಬೆಲೆ 2.50 ರೂ. ಹೆಚ್ಚಳವಾಗಿತ್ತು. ಮರು ದಿನವಾದ ಗುರುವಾರ(ಇಂದು) ಮತ್ತೆ ಅಷ್ಟೇ ಪ್ರಮಾಣದಲ್ಲಿ ದರ ಏರಿಕೆಯಾಗಿದೆ. ಇದರಿಂದ ದೆಹಲಿಯಲ್ಲಿ ಪ್ರತಿ ಕೆಜಿಗೆ 69.11 ರೂ., ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಕೆಜಿಗೆ 71.67 ರೂ. ಆಗಿದೆ. ಆದ್ರೆ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಏರಿಕೆಯಾಗಿಲ್ಲ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಪೆಟ್ರೋಲ್ ಬೆಲೆ 105 ರೂ. ದಾಟಿತ್ತು. ಮುಂಬೈನಲ್ಲಿ 120 ರೂ. ದಾಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 111.16 ರೂ. ಮತ್ತು ಡೀಸೆಲ್ ದರ 94.86 ರೂ. ದಾಖಲಾಗಿದೆ. ಇತ್ತ, ಇಂಧನ ಬೆಲೆ ಏರಿಕೆ ವಿಚಾರವಾಗಿ ಮಂಗಳವಾರ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರಿದೀಪ್ ಸಿಂಗ್ಪುರಿ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು. ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೇವಲ ಶೇ.5ರಷ್ಟು ಮಾತ್ರ ಬೆಲೆಯಲ್ಲಿ ಬದಲಾವಣೆಯಾಗಿದೆ ಎಂದಿದ್ದರು.
ಇದನ್ನೂಓದಿ: ಪೆಟ್ರೋಲ್, ಡೀಸೆಲ್ ಕೊಳ್ಳಲು ಸಾಧ್ಯವಾಗದಿದ್ದರೆ ಎಲೆಕ್ಟ್ರಿಕ್ ವಾಹನ ಖರೀದಿಸಿ: ಬಿಜೆಪಿ ಸಚಿವನ ವಿಚಿತ್ರ ಸಲಹೆ