ಆಗ್ರಾ: ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಿಂದ ದೇಶಾದ್ಯಂತ ದುಃಖ ಆವರಿಸಿದೆ. ಈ ಅವಘಡದಲ್ಲಿ ಆಗ್ರಾ ಮೂಲದ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಹೆಲಿಕಾಪ್ಟರ್ ಪೈಲಟ್ ಆಗಿದ್ದರು ಎಂದು ತಿಳಿದುಬಂದಿದೆ. ಅವಘಡದಲ್ಲಿ ಮೃತರಾದ ಪೃಥ್ವಿ ಸಿಂಗ್ ಚೌಹಾಣ್ ಅವರ ನ್ಯೂ ಆಗ್ರಾದಲ್ಲಿರುವ ಮನೆಯಲ್ಲಿ ಶೋಕ ಮಡುಗಟ್ಟಿದೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ರಾವತ್ ಅವರ ಜೊತೆಗೆ ಆಗ್ರಾದ ವೀರ ಪುತ್ರ ಪೃಥ್ವಿ ಸಿಂಗ್ ಚೌಹಾಣ್ ಕೂಡ ಇದ್ದರು. ಪೃಥ್ವಿ ಸಿಂಗ್ ಅವರು ನ್ಯೂ ಆಗ್ರಾದ ನಿವಾಸಿ ಸುರೇಂದ್ರ ಸಿಂಗ್ ಚೌಹಾಣ್ ಅವರ ಪುತ್ರರಾಗಿದ್ದರು. ವಾಯುಪಡೆಯ ಕೆಚ್ಚೆದೆಯ ಪೈಲಟ್‌ಗಳಲ್ಲಿ ಒಬ್ಬರಾಗಿದ್ದ ಪೃಥ್ವಿ ಸಿಂಗ್ ಅವರ ಮೊದಲ ಪೋಸ್ಟಿಂಗ್ ಹೈದರಾಬಾದ್‌ನಲ್ಲಾಗಿತ್ತು. ನಂತರ, ಪೃಥ್ವಿ ಅವರು ಗೋರಖ್‌ಪುರ, ಗುವಾಹಟಿ, ಉಧಮ್ ಸಿಂಗ್ ನಗರ, ಜಾಮ್‌ನಗರ, ಅಂಡಮಾನ್ ಮತ್ತು ನಿಕೋಬಾರ್ ಸೇರಿದಂತೆ ಇತರೆಡೆ ಕರ್ತವ್ಯ ನಿರ್ವಹಿಸಿದ್ದಾರೆ.
ನ್ಯೂ ಆಗ್ರಾದ ಸರನ್ ನಗರ ಕಾಲೋನಿ ನಿವಾಸಿ ಸುರೇಂದ್ರ ಸಿಂಗ್ ಅವರು ಬೇಕರಿ ಉದ್ಯಮಿ. ಸಿಂಗ್ ಅವರಿಗೆ ನಾಲ್ವರು ಪುತ್ರಿಯರು ಹಾಗೂ ಬಳಿಕ ಒಬ್ಬನೇ ಮಗ ಪೃಥ್ವಿ ಸಿಂಗ್ ಚೌಹಾಣ್ ಆಗಿದ್ದರು. ಪೃಥ್ವಿ ಸಿಂಗ್ ಚೌಹಾಣ್ ಅವರು ಸೇನಾ ಶಾಲೆಯಲ್ಲಿ ಪ್ರವೇಶಕ್ಕಾಗಿ ಪರೀಕ್ಷೆ ಬರೆದು, ರೇವಾ ಆರ್ಮಿ ಸ್ಕೂಲ್‌ಗೆ ದಾಖಲಾಗಿದ್ದರು. ಸೇನಾ ಶಾಲೆಯಲ್ಲಿ 12ನೇ ತರಗತಿವರೆಗೆ ಶಿಕ್ಷಣ ಪಡೆದ ಪೃಥ್ವಿ, ಬಳಿಕ ಎನ್‌ಡಿಎಗೆ ಆಯ್ಕೆಯಾಗಿ ಅಲ್ಲಿಂದ 2000ನೇ ಇಸವಿಯಲ್ಲಿ ವಾಯುಪಡೆಗೆ ಸೇರಿದ್ದರು. ಪ್ರಸ್ತುತ ವಿಂಗ್ ಕಮಾಂಡರ್ ಆಗಿದ್ದ ಅವರು ಕೊಯಮತ್ತೂರು ಬಳಿಯ ಏರ್ಫೋರ್ಸ್ ಸ್ಟೇಷನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2007ರಲ್ಲಿ ಕಾಮಿನಿ ಸಿಂಗ್ ಅವರನ್ನು ವಿವಾಹವಾಗಿದ್ದ ಅವರಿಗೆ 12 ವರ್ಷದ ಮಗಳು ಮತ್ತು ಒಂಬತ್ತು ವರ್ಷದ ಮಗ ಇದ್ದಾರೆ.
ಪೃಥ್ವಿ ಅವರ ತಾಯಿ ಸುಶೀಲಾ ಚೌಹಾಣ್ ಮತ್ತು ತಂದೆ ಸುರೇಂದ್ರ ಸಿಂಗ್ ಚೌಹಾಣ್ ಅವರ ರೋದನ ಮುಗಿಲುಮುಟ್ಟಿದೆ. ಪೋಸ್ಟ್ ವಿಂಗ್ ಕಮಾಂಡರ್ ಆಗಿದ್ದ ನನ್ನ ಮಗನಿಗೆ ಕೇವಲ 42 ವರ್ಷ, ಮೂರು ದಿನಗಳ ಹಿಂದಷ್ಟೇ ಆತನ ಜೊತರ ಮಾತನಾಡಿದ್ದೆ. ಸದ್ಯದಲ್ಲೇ ತಾಯಿ ಸುಶೀಲಾಳ ಕಣ್ಣಿನ ಚಿಕಿತ್ಸೆ ಮಾಡಿಸುವ ಬಗ್ಗೆ ಹೇಳಿದ್ದ. ಆದರೆ ಹೆಲಿಕಾಪ್ಟರ್ ದುರಂತದಲ್ಲಿ ಮಗ ಹುತಾತ್ಮನಾದ ಸುದ್ದಿ ಬಂದಿದೆ ಎಂದು ಸುರೇಂದ್ರ ಸಿಂಗ್ ದುಃಖ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ಕೇವಲ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ವಿಧಿವಶ!