ನವದೆಹಲಿ: ಮಹಾರಾಷ್ಟ್ರ ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತಯಾಚನೆ ಮಾಡಲು ರಾಜ್ಯಪಾಲರು ನೀಡಿರುವ ನಿರ್ಧಾರ ಪ್ರಶ್ನಿಸಿ, ಉದ್ಧವ್ ಠಾಕ್ರೆ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದರ ವಾದ-ಪ್ರತಿವಾದ ಆಲಿಸಿರುವ ಸರ್ವೋಚ್ಛ ನ್ಯಾಯಾಲಯ ರಾತ್ರಿ 9ಗಂಟೆಗೆ ತೀರ್ಪು ಪ್ರಕಟಿಸಲಿದೆ.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹತ್ವದ ಸಚಿವ ಸಂಪುಟ ಸಭೆ ನಡೆಸಿದರು. ಈ ವೇಳೆ ಕ್ಯಾಬಿನೆಟ್ ಸಚಿವರಿಗೆ ಧನ್ಯವಾದ ತಿಳಿಸಿದ ಅವರು, ಸುಮಾರು 2.5 ವರ್ಷಗಳ ಕಾಲ ನನಗೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದರು. ಇದೇ ವೇಳೆ ಮಾತು ಮುಂದುವರೆಸಿ, ಸುಪ್ರೀಂಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ವಿಶ್ವಾಸಮತಯಾಚನೆ ಅರ್ಜಿಯ ತೀರ್ಪು ತಮ್ಮ ವಿರುದ್ಧವಾಗಿ ಬಂದರೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಇದನ್ನೂ ಓದಿ: 'ಮಹಾ ಆಘಾಡಿ'ಗೆ ಸಿಎಂ ಉದ್ಧವ್ ಠಾಕ್ರೆ ಕೃತಜ್ಞತೆ; ಮಹಾರಾಷ್ಟ್ರ ಸರ್ಕಾರ ಪತನ ನಿಶ್ಚಿತ?
ಮಹಾವಿಕಾಸ್ ಅಘಾಡಿ ಮೈತ್ರಿ ವಿರುದ್ಧ ಶಿವಸೇನೆಯ 48 ಶಾಸಕರು ಬಂಡಾಯ ಎಂದಿರುವ ಕಾರಣ, ಇದೀಗ ಮಹಾರಾಷ್ಟ್ರ ಸರ್ಕಾರ ಅಲ್ಪ ಮತಕ್ಕೆ ಕುಸಿಯುವ ಭೀತಿಯಲ್ಲಿದೆ. ಇದರ ಲಾಭ ಪಡೆದುಕೊಳ್ಳಲು ಮುಂದಾಗಿರುವ ಬಿಜೆಪಿ ನಿನ್ನೆ ಸಂಜೆ ರಾಜ್ಯಪಾಲರನ್ನ ಭೇಟಿ ಮಾಡಿ, ವಿಶ್ವಾಸಮತಯಾಚನೆ ಮಾಡಲು ಸರ್ಕಾರಕ್ಕೆ ಸೂಚಿಸುವಂತೆ ಮನವಿ ಮಾಡಿಕೊಂಡಿತ್ತು.
ವಿಶ್ವಾಸಮತಯಾಚನೆ ಮಾಡಲು ರಾಜ್ಯಪಾಲರು ಉದ್ಧವ್ ಠಾಕ್ರೆ ಸರ್ಕಾರಕ್ಕೆ ಸೂಚನೆ ನೀಡಿರುವ ಕಾರಣ, ಇದೀಗ ಬಿಜೆಪಿಯ ಎಲ್ಲ ಶಾಸಕರು ತಾಜ್ ಪ್ರೆಸಿಡೆಂಟ್ ಹೋಟೆಲ್ಗೆ ಆಗಮಿಸಿದ್ದಾರೆ. ಇನ್ನೂ ಗುವಾಹಟಿಯಲ್ಲಿ ಉಳಿದುಕೊಂಡಿರುವ ಬಂಡಾಯ ಶಾಸಕರು ಗೋವಾದತ್ತ ಪ್ರಯಾಣ ಬೆಳೆಸಿದ್ದು, ನಾಳೆ ನೇರವಾಗಿ ವಿಧಾನಸಭೆಗೆ ಆಗಮಿಸುವ ಸಾಧ್ಯತೆ ಇದೆ. ಒಂದು ವೇಳೆ ಸುಪ್ರೀಂಕೋರ್ಟ್ನಲ್ಲಿ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಸೋಲಾದರೆ ಅವರು, ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.