ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆ, ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಅನುಕೂಲ ಮಾಡಿಕೊಡುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ರಾಜಧಾನಿ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣಗಳಲ್ಲಿರುವ ಕಾರ್ಮಿಕರು ಸ್ವಗ್ರಾಮಗಳಿಗೆ ಹಿಂದಿರುಗುವ ವೇಳೆ, ಖಾಸಗಿ ಬಸ್ಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲ್ವೆ ಸೌಲಭ್ಯಗಳನ್ನು ಕೇಂದ್ರಸರ್ಕಾರ ಒದಗಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಊರುಗಳಿಗೆ ತೆರಳುವ ವಿಚಾರ ಕುರಿತು ಸಾಮಾಜಿಕ ಕಾರ್ಯಕರ್ತರೊಬ್ಬರು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಂ.ಆರ್. ಶಾ ಅವರಿದ್ದ ನ್ಯಾಯಪೀಠ, ವಲಸೆ ಕಾರ್ಮಿಕರಿಗೆ ಆಹಾರ ಭದ್ರತೆ, ಹಣ ವರ್ಗಾವಣೆ, ಸಾರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಅವರಿಗೆ ತೊಂದರೆಯಾಗದಂತೆ ಛತ್ರ (ಸಮುದಾಯದ ಅಡುಗೆ ಮನೆಗಳು)ಗಳನ್ನು ನಿರ್ಮಿಸಿ ಊಟ ಒದಗಿಸಬೇಕು. ಊರುಗಳಿಗೆ ಮರಳಲು ಸಿದ್ಧವಿರುವವರಿಗೆ ಸಾರಿಗೆ ವ್ಯವಸ್ಥೆಯನ್ನು ಒದಗಿಸಬೇಕು ಎಂದು ನಿರ್ದೇಶಿಸಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಪ್ರಶಾಂತ ಭೂಷಣ್, ಕೋವಿಡ್ ಸಮಯದಲ್ಲಿ ಅನೇಕ ವಲಸಿಗರು ಉದ್ಯೋಗ ಕಳೆದುಕೊಂಡಿದ್ದಾರೆ. ಊರಿಗೆ ಹೋಗಲು ಹಣವಿಲ್ಲದೆ, ಒಪ್ಪೊತ್ತಿನ ಊಟವಿಲ್ಲದೆ ಪರದಾಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಜೂ.1ರವರೆಗೆ ಲಾಕ್ಡೌನ್ ವಿಸ್ತರಿಸಿ ಆದೇಶ
ದೇಶವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ. ಈ ಸಮಯದಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ನಿಲ್ಲಿಸದಂತೆ ನೋಡಿಕೊಳ್ಳಲು ಎಲ್ಲ ರಾಜ್ಯಗಳು ಪ್ರಯತ್ನಪಡುತ್ತಿವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಯಾವ ರಾಜ್ಯದಲ್ಲೂ ಸಂಪೂರ್ಣ ಲಾಕ್ಡೌನ್ ಮಾಡಿಲ್ಲ. ಕೈಗಾರಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಕಟ್ಟಡ ಕಾಮಗಾರಿಗಳು ಸಹ ನಡೆಯುತ್ತಿವೆ. ಈ ಕುರಿತು ಎಲ್ಲ ರಾಜ್ಯಗಳು ಅಭಿಪ್ರಾಯ ತಿಳಿಸಲು ಅನುಮತಿ ನೀಡಬೇಕೆಂದು ಮೆಹ್ತಾ ನ್ಯಾಯಪೀಠಕ್ಕೆ ಮನವಿ ಮಾಡಿದರು.