ಹೈದರಾಬಾದ್: ಮಹಾರಾಷ್ಟ್ರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿರುವ ಶಿವಸೇನೆಯ ಪ್ರಮುಖ ನಾಯಕ ಏಕನಾಥ ಶಿಂದೆ ಕೆಲ ಶಾಸಕರೊಂದಿಗೆ ಗುಜರಾತಿಗೆ ಹೋಗಿದ್ದರಿಂದ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಭೂಕಂಪವನ್ನೇ ಸೃಷ್ಟಿಸಿದೆ. ಗುಜರಾತಿನಲ್ಲಿ ಬಿಜೆಪಿಯ ಉನ್ನತ ನಾಯಕರನ್ನು ಶಿಂದೆ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಕನಿಷ್ಠ 12 ರಿಂದ ಗರಿಷ್ಠ 25 ಶಾಸಕರು ಶಿಂದೆ ಅವರೊಂದಿಗೆ ಗುಜರಾತಿನಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಕನಾಥ ಶಿಂದೆ ಬಂಡಾಯವು ಶಿವಸೇನೆಗೆ ಭಾರಿ ಆಘಾತ ತಂದಿದೆ. ಜೊತೆಗೆ ಮಹಾರಾಷ್ಟ್ರದ ಮಹಾವಿಕಾಸ ಆಘಾಡಿ ಸರ್ಕಾರದ ಅಸ್ತಿತ್ವಕ್ಕೆ ಕುತ್ತು ಎದುರಾದಂತಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಶಿವಸೇನೆಯ 56 ಶಾಸಕರಿದ್ದಾರೆ. ಶಿವಸೇನೆಯ ಓರ್ವ ಶಾಸಕರು ನಿಧನರಾಗಿದ್ದಾರೆ. ಎನ್ಸಿಪಿ 53 ಶಾಸಕರನ್ನು ಹಾಗೂ ಕಾಂಗ್ರೆಸ್ 44 ಶಾಸಕರನ್ನು ಹೊಂದಿದೆ. ಮಹಾವಿಕಾಸ ಆಘಾಡಿ ಸರ್ಕಾರಕ್ಕೆ ಇತರ ಚಿಕ್ಕ ಪುಟ್ಟ ಪಕ್ಷಗಳ 16 ಶಾಸಕರ ಬೆಂಬಲವೂ ಇದೆ. ಹೀಗೆ ಒಟ್ಟಾರೆ 168 ಶಾಸಕರ ಬೆಂಬಲ ಎಂವಿಎ ಸರ್ಕಾರಕ್ಕಿದೆ.
ಇನ್ನೊಂದೆಡೆ ಬಿಜೆಪಿ 106 ಶಾಸಕರನ್ನು ಹೊಂದಿದೆ. ಇನ್ನು ಐವರು ಪಕ್ಷೇತರ ಶಾಸಕರು ಕೂಡ ಬಿಜೆಪಿಯೊಂದಿಗಿದ್ದಾರೆ. ಆರ್ಎಸ್ಪಿ ಹಾಗೂ ಜನಸುರಾಜ್ಯ ಪಕ್ಷಗಳ ಓರ್ವ ಶಾಸಕರ ಬೆಂಬಲದಿಂದ ಬಿಜೆಪಿ ಬಲ 113 ಆಗಿದೆ. ಆದರೆ, ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ಸಿಪಿಯ ಕೆಲ ಶಾಸಕರ ಬೆಂಬಲ ತನಗಿದೆ ಎಂದು ಬಿಜೆಪಿ ಆಗಾಗ ಹೇಳುತ್ತಲೇ ಇದೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಗಳ ಫಲಿತಾಂಶದಿಂದ ಇದು ಸ್ಪಷ್ಟವಾಗಿದೆ.
ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಲು 145 ಶಾಸಕರ ಬೆಂಬಲ ಬೇಕು. ಸದ್ಯ ಮಹಾವಿಕಾಸ ಆಘಾಡಿಗೆ 168 ಶಾಸಕರ ಬೆಂಬಲವಿದೆ. ಈ ಮಧ್ಯೆ 25 ಶಾಸಕರು ಏಕನಾಥ್ ಶಿಂದೆ ಅವರೊಂದಿಗೆ ಗುಜರಾತಿಗೆ ಹೋಗಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಈ 25 ಶಾಸಕರು ಬಿಜೆಪಿಗೆ ಬೆಂಬಲ ನೀಡಿದರೆ ಅಧಿಕಾರದತ್ತ ಸಾಗುವ ಬಿಜೆಪಿಯ ಹಾದಿ ಖಂಡಿತವಾಗಿಯೂ ಸುಲಭವಾಗಲಿದೆ. ಇನ್ನು ಪಕ್ಷೇತರ ಶಾಸಕರು ಎಂವಿಎ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದರೂ ಸರ್ಕಾರ ಬೀಳುವ ಅಪಾಯವಿದೆ.
ಆದರೆ ಏನೇ ರಾಜಕೀಯ ಪಲ್ಲಟಗಳು ಆದರೂ ಬಿಜೆಪಿ 145 ಶಾಸಕರ ಬೆಂಬಲ ಗಳಿಸಿದರೆ ಮಾತ್ರ ಹೊಸ ಸರ್ಕಾರ ರಚನೆಯಾಗಲು ಸಾಧ್ಯ. ಬಿಜೆಪಿಯ ತನ್ನ 106 ಶಾಸಕರು ಹಾಗೂ ಇತರ ಬೆಂಲಿತ ಶಾಸಕರ ಸಂಖ್ಯೆ ಸೇರಿಸಿದರೆ 113 ಆಗುತ್ತದೆ. ಒಂದು ವೇಳೆ ಇನ್ನೂ 25 ಶಾಸಕರು ಬಿಜೆಪಿಗೆ ಬೆಂಬಲ ನೀಡಿದರೂ ಸಂಖ್ಯೆ 138ಕ್ಕೆ ನಿಲ್ಲುತ್ತದೆ. ಇಷ್ಟರಿಂದ ಸರ್ಕಾರ ಕೆಡವಲು ಸಾಧ್ಯವಿಲ್ಲ. ಮ್ಯಾಜಿಕ್ ನಂಬರ್ ಮುಟ್ಟಲು ಆಗಲೂ ಬಿಜೆಪಿಗೆ 8 ಶಾಸಕರ ಕೊರತೆಯಾಗುತ್ತದೆ. ಶಿಂದೆ ಜೊತೆಗೆ ಇನ್ನೂ ಕೆಲ ಶಾಸಕರು ಕೈಜೋಡಿಸಿದರೆ ಮಾತ್ರ ಬಿಜೆಪಿಗೆ ನಿಜವಾದ ಲಾಭ ಸಿಗಬಹುದು.
ಇದನ್ನು ಓದಿ:ಮಹಾರಾಷ್ಟ್ರದಲ್ಲಿ ಕ್ಷಿಪ್ರ ಕ್ರಾಂತಿಯೇ?..11 ಶಾಸಕರ ಜೊತೆ ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ನಾಪತ್ತೆ