ಅಲಿಘರ್(ಉತ್ತರ ಪ್ರದೇಶ): ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೊಸದರಲ್ಲಿ, ಗಂಡ-ಹೆಂಡತಿ ತುಂಬಾ ಅನ್ಯೋನ್ಯವಾಗಿ ಜೀವನ ನಡೆಸುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ ಅದಕ್ಕೆ ತದ್ವಿರುದ್ಧ ಎಂಬಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕುಡಿದ ಅಮಲಿನಲ್ಲಿ ನವವಿವಾಹಿತೆಯೋರ್ವಳು ಗಂಡನ ಎದೆಗೆ ಕಚ್ಚಿ, ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ಅಲಿಘರ್ನಲ್ಲಿ ನಡೆದಿದೆ.
ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಶೆಯಲ್ಲಿ ತನ್ನ ಪತ್ನಿ ಈ ರೀತಿಯಾಗಿ ನಡೆದುಕೊಂಡಿದ್ದಾಳೆಂದು ಗಂಡ ದೂರು ದಾಖಲು ಮಾಡಿದ್ದಾನೆ. ಅಲಿಗಢ ಜಿಲ್ಲೆಯ ತಪ್ಪಲ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಂದಾಯ ಗ್ರಾಮದಲ್ಲಿ ಈ ವಿಚಿತ್ರ ಪ್ರಕರಣ ನಡೆದಿದೆ.
ಕಳೆದ ಕೆಲ ತಿಂಗಳ ಹಿಂದೆ ನವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಯುವತಿ ಮದ್ಯಪಾನ, ಗಾಂಜಾ, ಬೀಡಿ-ಗುಟ್ಕಾ ಸೇವನೆ ಮಾಡುತ್ತಾಳಂತೆ. ಮದ್ಯಪಾನ ಮಾಡಿರುವ ಅಮಲಿನಲ್ಲಿ ಗಂಡನ ಎದೆಯ ಭಾಗಕ್ಕೆ ಕಚ್ಚಿದ್ದಾಳೆ. ಇದರಿಂದ ಗಾಯವಾಗಿದೆ ಎಂದು ಗಂಡ ಅಳಲು ತೋಡಿಕೊಂಡಿದ್ದಾನೆ.
ಇದನ್ನೂ ಓದಿ: ಮದುವೆ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ.. 50 ಸಾವಿರಕ್ಕೆ ಮಾರಾಟ ಮಾಡಿದ ಭೂಪ
ಘಟನೆಯಿಂದ ಮನನೊಂದಿರುವ ಆತ, ಪೊಲೀಸ್ ಠಾಣೆಗೆ ಬಂದು ಪತ್ನಿ ವಿರುದ್ಧ ದೂರು ನೀಡಿದ್ದಾನೆ. ನಶೆಯಲ್ಲಿ ನನ್ನೊಂದಿಗೆ ಗಲಾಟೆ ಮಾಡಿ, ಪತ್ನಿ ಹೊಡೆಯುತ್ತಾಳೆಂದು ಆರೋಪ ಮಾಡಿದ್ದಾನೆ. ಜೊತೆಗೆ ವೃದ್ಧ ತಂದೆಗೂ ಕೊಲೆ ಬೆದರಿಕೆ ಹಾಕಿದ್ದಾಳೆಂದು ತಿಳಿಸಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ದಂಪತಿ ನಡುವೆ ರಾಜಿ-ಸಂಧಾನ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಆದರೆ, ಆಕೆಯಿಂದ ವಿಚ್ಛೇದನ ಕೊಡಿಸುವಂತೆ ಗಂಡ ಬೇಡಿಕೆ ಇಟ್ಟಿದ್ದಾನೆ.