ಮಧ್ಯ ಪ್ರದೇಶ: ದಾಂಪತ್ಯವೆಂಬುದು ಸತಿ ಪತಿಗಳಿಬ್ಬರ ಬಂಧ. ಇದನ್ನು ಪರಸ್ಪರ ಗಟ್ಟಿಯಾಗಿಸುವುದೇ ಹೊಂದಾಣಿಕೆ. ಇದಕ್ಕೆ ಉತ್ತಮ ನಿದರ್ಶನದಂತೆ ಇದ್ದಾರೆ ಜಾರ್ಖಂಡ್‌ನ ಟೋಲಾ ಗ್ರಾಮದ ಧನಂಜಯ ಹಾಗೂ ಅನಿತಾ ದಂಪತಿ. ಮದುವೆಯಾದರೆ ಹೆಂಡತಿ ಮನೆಯಲ್ಲಿರಲಿ ಎನ್ನುವವರ ನಡುವೆ, ತಮ್ಮ ಮಡದಿಯ ವಿದ್ಯಾಭ್ಯಾಸಕ್ಕಾಗಿ ಯಾವ ಸಮಸ್ಯೆ ಬೇಕಾದರೂ ಎದರಿಸಲು ಸಿದ್ಧಸಿದ್ದಾರೆ ಧನಂಜನ್.
ಅವರ ಪತ್ನಿ ಅನಿತಾ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಎರಡನೇ ವರ್ಷದ ಡಿ.ಎಡ್ ವಿದ್ಯಾರ್ಥಿನಿಯಾಗಿದ್ದಾರೆ. ಲಾಕ್ಡೌನ್ ವೇಳೆ ಸೆಪ್ಟೆಂಬರ್ ತಿಂಗಳಲ್ಲಿ ಪರೀಕ್ಷೆ ಇತ್ತು. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಸ್ಕೂಟಿಯಲ್ಲಿ 1,200 ಕಿ.ಮೀ. ದೂರ ತಮ್ಮ ಹೆಂಡತಿಯನ್ನು ಕಡೆದುಕೊಂಡು ಹೋಗಿ ಪರೀಕ್ಷೆ ಬರೆಯಲು ನೆರವಾಗಿದ್ದಾರೆ.
ಗುಜರಾತ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಧನಂಜಯ್, ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡು ಮನೆಯಲ್ಲಿದ್ದರು. ಅದೇ ವೇಳೆ ಅನಿತಾ ಅವರ ಪರೀಕ್ಷೆಯ ದಿನಾಂಕ ಹತ್ತಿರವಾಗುತ್ತಿತ್ತು. ಬಸ್ ಮೂಲಕ ಗ್ವಾಲಿಯರ್‌ಗೆ ಹೋಗಲು ಯೋಚಿಸಿದಾಗ, ಒಬ್ಬರಿಗೆ ಖಾಸಗಿ ಬಸ್ನಲ್ಲಿ 15,000 ರೂ. ಬಸ್ ದರವಿತ್ತು. ಅವರಿಗೆ ಆ ವೆಚ್ಚವನ್ನು ಭರಿಸುವಷ್ಟು ಶಕ್ತಿ ಇರಲಿಲ್ಲ. ರೈಲು ಟಿಕೆಟ್ ಕಾಯ್ದಿರಿಸಿದ್ದರೂ ಕೂಡ ಕೊನೆಯ ಕ್ಷಣದಲ್ಲಿ ರೈಲು ರದ್ದುಗೊಂಡಿತು. ತಮ್ಮ ಹೆಂಡತಿಯನ್ನು ಗ್ವಾಲಿಯರ್‌ಗೆ ಕಳುಹಿಸಲು ಧನಂಜಯ್‌ಗೆ ಬೇರೆ ಯಾವ ದಾರಿಯೂ ಸಿಗಲಿಲ್ಲ. ಕೊನೆಗೆ 6 ತಿಂಗಳ ಗರ್ಭಿಣಿ ಹೆಂಡತಿಯನ್ನು ಸ್ಕೂಟಿಯಲ್ಲಿ ಗ್ವಾಲಿಯರ್‌ಗೆ ಕರೆದುಕೊಂಡು ಹೋಗಿದ್ದಾರೆ.
ಇನ್ನು ಗ್ವಾಲಿಯರ್ನಲ್ಲಿ ಅವರು ಉಳಿದುಕೊಳ್ಳುಲು ಸಮಸ್ಯೆ ಎದುರಾಯಿತು. ಆಗ ಈ ಕುರಿತು 'ಈಟಿವಿ ಭಾರತ' ವರದಿಯನ್ನು ಮಾಡಿತ್ತು. ಸುದ್ದಿ ಪ್ರಕಟಿಸಿದ ನಂತರ ಜಿಲ್ಲಾಡಳಿತ ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ಅವರಿಗೆ ಸಹಾಯ ಮಾಡಿದ್ದರು. ಜಿಲ್ಲಾಡಳಿತವು 5000 ರೂ. ಆರ್ಥಿಕ ನೆರವು ನೀಡಿದರೆ, ಕೆಲವು ಸಾಮಾಜಿಕ ಕಾರ್ಯಕರ್ತರು ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಿದ್ದರು. ಇನ್ನು ಇದೀಗ ಧನಂಜಯ ದಂಪತಿಗೆ ಗಂಡು ಮಗು ಜನಿಸಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅನಿತಾ ತುಂಬಾ ಸಂತೋಷವಾಗಿದ್ದಾರೆ.
ತಮ್ಮ ಪತ್ನಿಯು ಶಿಕ್ಷಕಿ ಆಗಬೇಕೆಂಬುದು ಧನಂಜನ್ ಅವರ ಆಸೆ. ಅದರಂತೆ ಅನಿತಾ ಕೂಡ ಚೆನ್ನಾಗಿ ಓದುತ್ತಿದ್ದಾರೆ. ದಂಪತಿಗೆ ಮುದ್ದಾದ ಗಂಡು ಮಗು ಜನಿಸಿದ್ದು, ಎಲ್ಲರೂ ತುಂಬಾ ಸಂತೋಷವಾಗಿದ್ದಾರೆ.