ಬರುಯಿಪುರ್ (ಪಶ್ಚಿಮ ಬಂಗಾಳ): ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಕೊಲೆ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲಿ ನೌಕಾಪಡೆಯ ಮಾಜಿ ನೌಕರರೊಬ್ಬರ ಹತ್ಯೆಯಾಗಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಮತ್ತು ಆತನ ಮಗ ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಮೃತದೇಹವನ್ನು ಆರು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿರುವ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ್ನ ನಿವಾಸಿ ಉಜ್ಜಲ್ ಚಕ್ರವರ್ತಿ (54) ಎಂಬುವವರೇ ಕೊಲೆಯಾದ ವ್ಯಕ್ತಿ. ಈ ಮೊದಲು ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಿದ್ದ ಇವರು 2000ರಲ್ಲಿ ನಿವೃತ್ತಿ ಹೊಂದಿದ್ದರು. ಸದ್ಯ ಖಾಸಗಿ ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ, ನ.14ರಂದು ಉಜ್ಜಲ್ ಚಕ್ರವರ್ತಿಯನ್ನು ಮನೆಯಲ್ಲೇ ಪತ್ನಿ ಮತ್ತು ಮಗ ಕೂಡಿಕೊಂಡು ಕೊಲೆ ಮಾಡಿದ್ದಾರೆ. ಇದನ್ನು ಮುಚ್ಚಿ ಹಾಕಲೆಂದು ಮರು ದಿನ ಅಂದ್ರೆ ನ.15ರಂದು ಉಜ್ಜಲ್ ಚಕ್ರವರ್ತಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗೆ ಪತ್ನಿ ಮತ್ತು ಮಗ ದೂರು ನೀಡಿದ್ದರು.
ಕೊಲೆ ಮಾಡಿ ನಾಪತ್ತೆ ದೂರು ಕೊಟ್ಟಿದ್ದರು: ಉಜ್ಜಲ್ ಚಕ್ರವರ್ತಿ ನಾಪತ್ತೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಬೆಚ್ಚಿ ಬೀಳಿಸುವ ಅಂಶ ಬೆಳಕಿಗೆ ಬಂದಿದೆ. ತಾಯಿ ಮತ್ತು ಮಗನೇ ಏನೋ ಮಾಡಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಆದ್ದರಿಂದ ದೂರು ಕೊಟ್ಟಿದ್ದ ತಾಯಿ ಹಾಗೂ ಮಗ ಇಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಉಜ್ಜಲ್ ಚಕ್ರವರ್ತಿಯನ್ನು ಕೊಲೆಗೈದ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.
ಉಜ್ವಲ್ ಚಕ್ರವರ್ತಿ ಮದ್ಯ ಸೇವಿಸಿ ಪತ್ನಿ ಮತ್ತು ಮಗನೊಂದಿಗೆ ಜಗಳವಾಡುತ್ತಿದ್ದರು. ಕಳೆದ ಸೋಮವಾರ ಎಂದರೆ ನ.14ರಂದು ಕೂಡ ಮನೆಯಲ್ಲಿ ಚಕ್ರವರ್ತಿ ಗಲಾಟೆ ಮಾಡಿದ್ದಾರೆ. ಇದರಿಂದ ಕೋಪದಲ್ಲಿ ಚಕ್ರವರ್ತಿ ಅವರನ್ನು ಮಗ ಜೋರಾಗಿ ತಳ್ಳಿದ್ದಾರೆ. ಪರಿಣಾಮ ನೆಲಕ್ಕೆ ಬಿದ್ದಿದ್ದ ಚಕ್ರವರ್ತಿ ತಾಯಿ ಮತ್ತು ಮಗ ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಎಸ್ಪಿ ಪುಷ್ಪಾ ಮಾಹಿತಿ ನೀಡಿದ್ದಾರೆ.
ಶವ ಕತ್ತರಿಸಿ ಎಸೆದಿದ್ದ ತಾಯಿ ಮತ್ತು ಮಗ: ಉಜ್ಜಲ್ ಚಕ್ರವರ್ತಿ ಕೊಲೆ ಮಾಡಿದ ತಾಯಿ ಮತ್ತು ಮಗ ಮತ್ತೊಂದು ಖರ್ತನಾಕ್ ಪ್ಲಾನ್ ಮಾಡಿದ್ದಾರೆ. ಮೃತ ದೇಹವನ್ನು ಮನೆಯಿಂದ ಹೊರ ಸಾಗಿಸಲೆಂದು ಆಯುಧಗಳಿಂದ ಆರು ತುಂಡುಗಳಾಗಿ ಕತ್ತರಿಸಿದ್ದಾರೆ. ವಿವಿಧ ಸ್ಥಳಗಳಲ್ಲಿ ಶವದ ತುಂಡುಗಳನ್ನು ಸೈಕಲ್‌ನಲ್ಲಿ ಸಾಗಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾರೆ ಎಂದೂ ಎಸ್ಪಿ ತಿಳಿಸಿದ್ದಾರೆ.
ಗುರುವಾರ ರಾತ್ರಿ ಬರುಯಿಪುರ್-ಮಲ್ಲಿಕ್‌ಪುರ ರಸ್ತೆಯ ದಿಹಿ ಪ್ರದೇಶದ ಕೊಳದಲ್ಲಿ ಉಜ್ವಲ್ ಚಕ್ರವರ್ತಿ ಅರ್ಧ ದೇಹ ಪತ್ತೆಯಾಗಿದೆ. ಮುಖವನ್ನೂ ಪ್ಲಾಸ್ಟಿಕ್ನಲ್ಲಿ ಸುತ್ತಿ ಮುಚ್ಚಲಾಗಿತ್ತು. ಎರಡು ಕೈಗಳು ಮತ್ತು ಸೊಂಟದ ಕೆಳಗಿನ ಭಾಗಗಳ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಜೊತೆಗೆ ಆರೋಪಿ ತಾಯಿ ಮತ್ತು ಮಗ ಇಬ್ಬರನ್ನೂ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶ್ರದ್ಧಾ ಶವದ ಪಕ್ಕ ಕುಳಿತು ಗಾಂಜಾ ಸೇದಿದ್ದ ಅಫ್ತಾಬ್: ಮತ್ತೊಂದು ಬ್ಯಾಗ್ ಪತ್ತೆ, ಸ್ನೇಹಿತರ ಚಾಟಿಂಗ್ ಪರಿಶೀಲನೆ