ನವದೆಹಲಿ: ಪೆಗಾಸಸ್ ಪ್ರಕರಣ ಮುಂದಿಟ್ಟುಕೊಂಡು ಕಳೆದ ಕೆಲ ದಿನಗಳಿಂದ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದ್ದು, ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರ ಮೊಬೈಲ್ ಹ್ಯಾಕ್ ಮಾಡಲಾಗಿದೆ ಎಂದು ಆರೋಪಗಳು ಕೇಳಿಬಂದಿವೆ. ಇದೇ ವಿಚಾರವನ್ನಿಟ್ಟುಕೊಂಡು ಸಂಸತ್ ಅಧಿವೇಶನದಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಸಹ ನಡೆಸಲಾಗುತ್ತಿದೆ. ಇದೀಗ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗದ ರಾಹುಲ್ ಗಾಂಧಿಯವರ ಮೊಬೈಲ್ ಹ್ಯಾಕ್ ಮಾಡುವ ಅವಶ್ಯಕತೆ ಏನಿದೆ? ಅದರಿಂದ ಸಿಗುವ ಲಾಭವಾದರೂ ಏನು? ಎಂದು ಪ್ರಶ್ನಿಸಿದ್ದಾರೆ. ಸಂಸತ್ ಅಧಿವೇಶನ ಮೊಟಕುಗೊಳಿಸುವ ಉದ್ದೇಶದಿಂದಲೇ ಪ್ರತಿಪಕ್ಷಗಳು ಈ ರೀತಿಯಾಗಿ ನಡೆದುಕೊಳ್ಳುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರತಿಪಕ್ಷಗಳ ಮುಖ್ಯ ಉದ್ದೇಶ ಒಂದೇ. ತಮ್ಮ ತಮ್ಮ ಪಕ್ಷಗಳ ರಕ್ಷಣೆ ಮಾಡಿಕೊಳ್ಳುವುದು. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ರಾಜಕೀಯವಾಗಿ ನೆಲೆ ಕಾಣಬೇಕಾಗಿದೆ. ಅದಕ್ಕಾಗಿ ಆಡಳಿತ ಪಕ್ಷದ ವಿರುದ್ಧ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರೇ ಮೊದಲು ನಿಮ್ಮ ಮೊಬೈಲ್ ಪರೀಕ್ಷೆ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ. ನಿಮ್ಮ ಮೊಬೈಲ್ನಲ್ಲಿ ಅಷ್ಟೊಂದು ಮಾಹಿತಿ ಇದ್ದರೆ ಅಥವಾ ಹ್ಯಾಕ್ ಆಗಿದ್ದರೆ ಇಲ್ಲಿಯವರೆಗೆ ದೂರು ನೀಡಿಲ್ಲ ಯಾಕೆ? ಎಂದು ಪಾತ್ರ ಪ್ರಶ್ನಿಸಿದರು.
ಇಸ್ರೇಲ್ ಮೂಲದ ಅಪ್ಲಿಕೇಶನ್ ಪೆಗಾಸಸ್ ಮೂಲಕ ಕೇಂದ್ರ ಸರ್ಕಾರ ಪತ್ರಕರ್ತರು, ರಾಹುಲ್ ಗಾಂಧಿ ಸೇರಿದಂತೆ ಅನೇಕರ ಮೊಬೈಲ್ ಹ್ಯಾಕ್ ಮಾಡಿದೆ ಎಂದು ಆರೋಪಸಿಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟನೆಯನ್ನು ಸಹ ನೀಡಿದೆ.