ನವದೆಹಲಿ: ಪ್ರಧಾನಿ ಮೋದಿ ಭಾನುವಾರ ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 100ನೇ ಕಂತು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಭಾಷಣದ ಆರಂಭದಲ್ಲಿಯೇ ಲಕ್ಷ್ಮಣ್ರಾವ್ ಇನಾಮದಾರ್ ಅವರನ್ನು ಸ್ಮರಿಸಿದ್ದಾರೆ. ''ವಕೀಲ್ ಸಾಹೇಬ್'' ಇನಾಮದಾರ್ ಅವರನ್ನು ನನ್ನ ಸಾಮಾಜಿಕ ಜೀವನಕ್ಕೆ ಮಾರ್ಗದರ್ಶನ ನೀಡಿದವರು ಎಂದು ಪ್ರಧಾನಿ ಉಲ್ಲೇಖಿಸಿದರು. ಹಾಗಾದರೆ, ಈ ಲಕ್ಷ್ಮಣ್ರಾವ್ ಇನಾಮದಾರ್ ಯಾರು ಎಂಬ ಮಾಹಿತಿ ಇಲ್ಲಿದೆ.
ಲಕ್ಷ್ಮಣ್ ರಾವ್ ಇನಾಮದಾರ್ ಅವರು ಮಹಾರಾಷ್ಟ್ರದ ಪುಣೆಯಿಂದ 130 ಕಿಮೀ ದೂರದಲ್ಲಿರುವ ಖಟಾವ್ ಗ್ರಾಮದಲ್ಲಿ ಸರ್ಕಾರಿ ಕಂದಾಯ ಅಧಿಕಾರಿಯೊಬ್ಬರ ಕುಟುಂಬದಲ್ಲಿ 1917ರಲ್ಲಿ ಜನಿಸಿದರು. 10 ಜನ ಒಡಹುಟ್ಟಿದವರಲ್ಲಿ ಒಬ್ಬರಾದ ಅವರು, 1943ರಲ್ಲಿ ಪೂನಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಇದಾದ ಕೆಲವೇ ದಿನಗಳಲ್ಲಿ ಆರ್‌ಎಸ್‌ಎಸ್ ಸೇರಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಹೈದರಾಬಾದ್ ನಿಜಾಮರ ಆಳ್ವಿಕೆಯ ವಿರುದ್ಧ ಚಳುವಳಿಯ ನೇತೃತ್ವ ವಹಿಸಿದರು. ಇದರ ನಂತರ ಗುಜರಾತ್ ಪ್ರಚಾರಕರಾಗಿ ಸೇರಿಕೊಂಡರು. ಜೀವನ ಪರ್ಯಂತ ಮದುವೆಯಾಗದೇ ಉಳಿದಿದ್ದ ಇನಾಮದಾರ್ ತಮ್ಮ 67ನೇ ವಯಸ್ಸಿನಲ್ಲಿ 1984ರಲ್ಲಿ ಕೊನೆಯುಸಿರೆಳೆದರು.
ಇನಾಮದಾರ್-ಮೋದಿ ಬೆಸುಗೆ: 1960ರ ದಶಕದ ಆರಂಭದಲ್ಲಿ ಮೋದಿ ಇನಾಮದಾರ್ ಅವರನ್ನು ಭೇಟಿಯಾದರು. ಆ ಸಮಯದಲ್ಲಿ 1943ರಿಂದ ಗುಜರಾತ್‌ನಲ್ಲಿ ಆರ್‌ಎಸ್‌ಎಸ್‌ನ ರಾಜ್ಯ ಪ್ರಚಾರಕರಾಗಿದ್ದರು. ಶಾಖೆಗಳಿಗೆ ಸೇರಲು ಯುವಕರನ್ನು ಪ್ರೇರೇಪಿಸುವುದು ಇವರ ಕೆಲಸವಾಗಿತ್ತು. ವಡ್‌ನಗರದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ನಿರರ್ಗಳವಾಗಿ ಗುಜರಾತಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಆಗ ಮೋದಿ ಮೊದಲ ಬಾರಿಗೆ ಇನಾಮದಾರ್ ಅವರ ಬಗ್ಗೆ ತಿಳಿದು, ಭಾಷಣದಿಂದ ಪ್ರಭಾವಿತಗೊಂಡರು. ಅಲ್ಲಿಂದ ಅವರ ಸಂಪರ್ಕವನ್ನು ಬೆಸೆದುಕೊಂಡರು. ಮೋದಿಯವರ ಜೀವನದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ್ದ ವ್ಯಕ್ತಿ ಯಾರಾದರೂ ಇದ್ದರೆ ಅದು ಲಕ್ಷ್ಮಣ್ರಾವ್ ಇನಾಮದಾರ್ ಎಂದೇ ಬಹುಕೇತರ ನಂಬುಗೆ. ಮೋದಿಯವರ ಜೀವನದ ಬಗ್ಗೆ ಪುಸ್ತಕಗಳನ್ನು ಬರೆದಿರುವ ಲೇಖಕರು ಸಹ ಇದನ್ನೇ ಹೇಳುತ್ತಾರೆ.
ಸಾಮಾಜಿಕ ಸಮಸ್ಯೆಗಳ ಮೇಲಿನ ಅರಿವು, ಕಟ್ಟುನಿಟ್ಟಾದ ಶಿಸ್ತು ಮತ್ತು ನಿರಂತರವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಇನಾಮದಾರ್ ಅವರಿಂದಲೇ ಮೋದಿ ಕಲಿತಿದ್ದಾರೆ. ಯೋಗ, ಪ್ರಾಣಾಯಾಮದ ಅಭ್ಯಾಸಗಳು ಕೂಡ ಇನಾಮದಾರ್ ಅವರಿಂದಲೇ ಮೋದಿ ಅವರಿಗೆ ಬಂದಿವೆ. ಇನಾಮದಾರ್ ಅವರನ್ನು ''ವಕೀಲ್ ಸಾಹೇಬ್'' ಎಂದು ಮೋದಿ ಕರೆಯುತ್ತಿದ್ದರು. 2008ರಲ್ಲಿ ಹೊರ ಬಂದ 'ಜ್ಯೋತಿಪುಂಜ್' (ಇನಾಮದಾರ್ ಸೇರಿದಂತೆ 16 ಆರ್‌ಎಸ್‌ಎಸ್ ನಾಯಕರ ಜೀವನಚರಿತ್ರೆ) ಎಂಬ ಪುಸ್ತಕದಲ್ಲಿ ಮೋದಿ ಅವರೇ ಬರೆದಂತೆ, ''ವಕೀಲ್ ಸಾಹೇಬ್'' ಅವರು ತಮ್ಮ ಕೇಳುಗರನ್ನು ಮನವೊಲಿಸಲು ದೈನಂದಿನ ಉದಾಹರಣೆಗಳನ್ನು ಬಳಸುವ ಸಾಮರ್ಥ್ಯ ಹೊಂದಿದ್ದರು. ಒಬ್ಬ ವ್ಯಕ್ತಿಗೆ ಉದ್ಯೋಗದಲ್ಲಿ ಆಸಕ್ತಿ ಇರಲಿಲ್ಲ. ಅಂತಹ ವ್ಯಕ್ತಿಗೆ ಕೆಲಸ ಮಾಡಲು ಹೇಗೆ ಇನಾಮದಾರ್ ಪ್ರೇರೇಪಿಸಿದ್ದರು ಎಂಬುದನ್ನು ಮೋದಿ ಆ ಪುಸ್ತಕದಲ್ಲಿ ವಿವರಿಸಿದ್ದಾರೆ. ''ನುಡಿಸಿದರೆ ಕೊಳಲು, ಇಲ್ಲದಿದ್ದರೆ ಕೋಲು'' ಎಂಬುದು ಇನಾಮದಾರ್ ಅವರ ತತ್ವವಾಗಿತ್ತು ಎಂಬವುದನ್ನು ಉದಾಹರಣೆ ಸಮೇತ ಉಲ್ಲಖಿಸಿದ್ದಾರೆ.
ಮನ್ ಕಿ ಬಾತ್ನಲ್ಲಿ ಮೋದಿ ಹೇಳಿದ್ದೇನು?: ಮನ್ ಕಿ ಬಾತ್ನಲ್ಲಿ ತಮ್ಮ ಮಾರ್ಗದರ್ಶಕರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ''ನನಗೆ ಲಕ್ಷ್ಮಣರಾವ್ ಜಿ ಇನಾಮದಾರ್ ಎಂಬ ಗುರುಗಳಿದ್ದರು. ನಾವು ಅವರನ್ನು ವಕೀಲ್ ಸಾಹೇಬ್ ಎಂದು ಕರೆಯುತ್ತಿದ್ದೆವು. ನಾವು ಇತರ ಜನರಲ್ಲಿರುವ ಒಳ್ಳೆಯ ಗುಣಗಳನ್ನು ಪೂಜಿಸಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಅದು ಯಾರೇ ಆಗಿರಲಿ, ಸಹವರ್ತಿ ಅಥವಾ ಎದುರಾಳಿ.. ನಾವು ಯಾವಾಗಲೂ ಅವರ ಉತ್ತಮ ಗುಣಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಅವುಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕೆಂಬ ಅವರ ಮಾತುಗಳು ನನಗೆ ಯಾವಾಗಲೂ ಸ್ಫೂರ್ತಿ ನೀಡುತ್ತವೆ. ಮನ್ ಕಿ ಬಾತ್ ಸಹ ಇತರರಿಂದ ಕಲಿಯುವ ಪ್ರಮುಖ ಮಾಧ್ಯಮ'' ಎಂದು ತಿಳಿಸಿದರು.
ಇದನ್ನೂ ಓದಿ: ಮನ್ ಕಿ ಬಾತ್ ದೇಶದ ಕೋಟ್ಯಂತರ ಜನರ ಧ್ವನಿ: ಪ್ರಧಾನಿ ಮೋದಿ