ಬಿಜಾಪುರ(ಛತ್ತೀಸ್ಗಢ): ಕಳೆದ ಅನೇಕ ವರ್ಷಗಳಿಂದ ಛತ್ತೀಸ್‌ಗಢದ ವಿವಿಧ ಪ್ರದೇಶಗಳಲ್ಲಿ ಮೇಲಿಂದ ಮೇಲೆ ನಕ್ಸಲ್ ದಾಳಿ ನಡೆಯುತ್ತಲೇ ಇರುತ್ತವೆ. ಪ್ರಮುಖವಾಗಿ ಸುಕ್ಮಾ ಹಾಗೂ ಬಿಜಾಪುರ್ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಅತಿ ಹೆಚ್ಚಿನ ದಾಳಿ ನಡೆಯುತ್ತಿದೆ. ಎರಡು ದಿನಗಳ ಹಿಂದೆ ನಡೆದ ಭೀಕರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.
ಬಿಜಾಪುರ್ನಲ್ಲಿ ನಡೆದ ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ನಕ್ಸಲೈಟ್ ಕಮಾಂಡರ್ ಹಿದ್ಮಾ ಎಂದು ಗುರುತಿಸಲಾಗಿದೆ. ಪೊಲೀಸ್ ಗುಪ್ತಚರ ಇಲಾಖೆ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿಗಳ ಪ್ರಕಾರ ಈತನ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಪ್ರಮುಖವಾಗಿ ರಾಕೆಟ್ ಲಾಂಚರ್, ಎಕೆ 47 ನಂತಹ ಆಯುಧಗಳಿವೆ ಎಂಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯೋಧರ ತ್ಯಾಗ ವ್ಯರ್ಥವಾಗಲ್ಲ, ನಕ್ಸಲರಿಗೆ ಶಸ್ತ್ರಾಸ್ತ್ರಗಳಿಂದಲೇ ಉತ್ತರ: ಅಮಿತ್ ಶಾ ಗುಡುಗು
ನಕ್ಸಲ್ ದಾಳಿ ನಡೆಸಲು ಹಿದ್ಮಾಗೆ ಬೇರೆ ಕಡೆಯಿಂದ ಆಜ್ಞೆ ನೀಡಲಾಗುತ್ತದೆಯಂತೆ. ಇಲ್ಲಿಯವರೆಗೆ ಅನೇಕ ಕಾರ್ಯಾಚರಣೆ ನಡೆಸಿರುವ ಈತನನ್ನು ಹಿಡಿಯಲು ನಡೆಸಿರುವ ಪ್ರಯತ್ನಗಳು ಮಾತ್ರ ಯಶಸ್ಸು ಕಂಡಿಲ್ಲ. ಹಿದ್ಮಾ ಬಿಜಾಪುರದ ತಾರೆಮ್ ಪ್ರದೇಶದಲ್ಲಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲು ಮುಂದಾದ ಪರಿಣಾಮ 22 ಯೋಧರು ಹುತಾತ್ಮರಾಗಿದ್ದಾರೆ. ಪ್ರತಿದಾಳಿಯಲ್ಲಿ ಅನೇಕ ನಕ್ಸಲರು ಸಹ ಹತರಾಗಿದ್ದಾರೆ.
50 ಲಕ್ಷ ರೂ. ಬಹುಮಾನ ಘೋಷಣೆ
ಮಾಸ್ಟರ್ ಮೈಂಡ್ ಹಿದ್ಮಾನನ್ನು ಹುಡುಕಿಕೊಟ್ಟವರಿಗೆ 50 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಆದರೆ ಕಳೆದ 13 ವರ್ಷಗಳಿಂದ ಇಲ್ಲಿಯವರೆಗೆ ಈತನ ಸುಳಿವು ಸಹ ಸಿಕ್ಕಿಲ್ಲ. ಈತನ ಪೂರ್ಣ ಹೆಸರು ಮಾಡವಿ ಹಿದ್ಮಾ ಆಗಿದ್ದು, ಸದ್ಯ ಛತ್ತೀಸ್‌ಗಢದ ನಕ್ಸಲರ ಟಾಪ್ ಕಮಾಂಡ್ ಪಟ್ಟಿಯಲ್ಲಿದ್ದಾನೆ. ಸುಕ್ಮಾ ಹಾಗೂ ಬಿಜಾಪುರ್ನಲ್ಲಿ ನಡೆಯುವ ಯಾವುದೇ ನಕ್ಸಲ್ ದಾಳಿಯ ಹಿಂದೆ ಈತನ ಕೈವಾಡವಿರುತ್ತದೆ ಎನ್ನಲಾಗ್ತಿದೆ. ನಕ್ಸಲ ಪೀಡಿತ ಕೆಲವೊಂದು ಹಳ್ಳಿಗಳಲ್ಲಿ ಈತನ ಆಜ್ಞೆ ಪಾಲನೆಯಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.
ಈತನಿಗೆ ಸುಮಾರು 40 ವರ್ಷ ವಯಸ್ಸಾಗಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕೆಲವೊಂದು ಪ್ರದೇಶಗಳಲ್ಲಿ ಓಡಾಡಿಕೊಂಡಿರುತ್ತಾನೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.