ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಿಡಿಕಾರುವ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯಸ್ವಾಮಿ ಅವರು ಭಾರತಕ್ಕಿಂತ ಯಥೇಚ್ಛವಾಗಿ ಹೊರ ರಾಷ್ಟ್ರಗಳಿಗೆ ಲಸಿಕೆ ಪೂರೈಸಿದರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಭಾರತವು ತನ್ನದೇ ನಾಗರಿಕರಿಗೆ ಲಸಿಕೆ ನೀಡುವುದಕ್ಕಿಂತ ಜಾಗತಿಕವಾಗಿ ಹೆಚ್ಚು ಕೋವಿಡ್-19 ಲಸಿಕೆಗಳನ್ನು ಪೂರೈಸಿದೆ ಎಂದು ಭಾರತದ ಪ್ರತಿನಿಧಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದರು. ಈ ಬಗೆಗಿನ ಮಾಧ್ಯಮ ವರದಿ ಫೋಸ್ಟ್ ಮಾಡಿ ಕೇಂದ್ರದ ನಡೆ ಟೀಕಿಸಿದ್ದಾರೆ.
ಇದು ಯಾವ ರೀತಿಯ ಹುಚ್ಚು ಆದ್ಯತೆಯಾಗಿದೆ? ಮೋದಿ ಅವರನ್ನು ಹೊಗಳಲು ವಿದೇಶಿಯರು ಬದುಕಲು ನಮ್ಮ ಜನರು ಸಾಯಿಸಬೇಕಾ ಎಂದು ಸುಬ್ರಹ್ಮಣ್ಯ ಸ್ವಾಮಿ ಪ್ರಶ್ನಿಸಿದ್ದಾರೆ.
180ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಬೆಂಬಲವನ್ನು ಗಳಿಸಿದ 'ಕೋವಿಡ್-19 ಲಸಿಕೆಗಳಿಗೆ ಸಮಾನ ಜಾಗತಿಕ ಪ್ರವೇಶದ ರಾಜಕೀಯ ಘೋಷಣೆ'ಯ ಪ್ರಾರಂಭಿಕರಲ್ಲಿ ಭಾರತವೇ ಮೊದಲ ರಾಷ್ಟ್ರವಾಗಿದೆ ಎಂದು ಭಾರತದ ಯುಎನ್ ರಾಯಭಾರಿ ಡೆಪ್ಯುಟಿ ಖಾಯಂ ಪ್ರತಿನಿಧಿ ಕೆ. ನಾಗರಾಜ್ ನಾಯ್ಡು ಅವರು ಸಾಮಾನ್ಯ ಸಭೆಯ ಅನೌಪಚಾರಿಕ ಸಮಾವೇಶದಲ್ಲಿ ಹೇಳಿದ್ದರು.
ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಮುಂದಿನ ಆರು ತಿಂಗಳಲ್ಲಿ ಭಾರತವು ತನ್ನದೇ ಆದ 300 ಮಿಲಿಯನ್ ಕಾರ್ಮಿಕರಿಗೆ ಲಸಿಕೆ ನೀಡಲಿದೆ. ಈ ಪ್ರಕ್ರಿಯೆಯಲ್ಲಿ 70ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಲಸಿಕೆಗಳನ್ನು ಸರಬರಾಜು ಮಾಡಿದೆ. ವಾಸ್ತವವಾಗಿ, ಈ ವೇಳೆಗಾಗಲೇ ನಾವು ನಮ್ಮ ನಾಗರಿಕರಿಗೆ ಲಸಿಕೆ ನೀಡಿದ್ದಕ್ಕಿಂತ ಹೆಚ್ಚಿನ ಲಸಿಕೆಗಳನ್ನು ಜಾಗತಿಕವಾಗಿ ಪೂರೈಸಿದ್ದೇವೆ ಎಂದು ತಿಳಿಸಿದ್ದರು.