ಹೈದರಾಬಾದ್: ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ಸಂಬಂಧಿಕರ ಮೇಲೆ ಜಾರಿ ನಿರ್ದೇಶನಾಲಯದ ದಾಳಿಗೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಅಸ್ಪಷ್ಟ ಹೇಳಿಕೆ ನೀಡಿದ್ದಾರೆ. ಸದ್ಯ ಅವರು ಬಿಜೆಪಿ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿದ್ದಾರೆ.
ಅವರು ನೀಡಿದ ಅಸ್ಪಷ್ಟ ಉತ್ತರವು, ಹಳೆಯ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಬಿಹಾರ ಸಿಎಂ ಹೊಂದಾಣಿಕೆ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಯಾದವ್ ಕುಟುಂಬದ ಮೇಲಿನ ಇಡಿ, ಸಿಬಿಐ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಲು ಸುದ್ದಿಗಾರರು ಕೇಳಿದಾಗ ನಿತೀಶ್ ಕುಮಾರ್ ಅವರು, "ಇದು 2017ರಲ್ಲಿ ದಾಳಿಗಳು ಸಂಭವಿಸಿತ್ತು. ನಂತರ ನಾವು (ಜೆಡಿಯು - ಆರ್‌ಜೆಡಿ) ಪ್ರತ್ಯೇಕ ದಾರಿಯಲ್ಲಿ ಹೋದೆವು. ಈಗಾಗಲೇ ಐದು ವರ್ಷಗಳು ಕಳೆದಿವೆ. ಈಗ ಮತ್ತೆ ಒಟ್ಟಿಗೆ ಬಂದಿದ್ದೇವೆ. ಪುನಃ ಇಡಿ, ಸಿಬಿಐ ದಾಳಿಗಳು ಸಂಭವಿಸಿವೆ. ನಾನು ಈ ವಿಚಾರದ ಏನು ಹೇಳಲಿ?" ಎಂದರು.
ಭೂಮಿ - ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತೇಜಸ್ವಿ ಯಾದವ್ ಅವರನ್ನು ಶನಿವಾರ ವಿಚಾರಣೆಗೆ ಕರೆದ ಬೆನ್ನಲ್ಲೇ ನಿತೀಶ್ ಕುಮಾರ್ ಅವರ ಹೇಳಿಕೆ ಹಲವು ಚರ್ಚೆಗಳಿಗೆ ಗ್ರಾಸವಾಗಿವೆ. 2004-05ರಲ್ಲಿ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ನಡೆದ ರೈಲ್ವೆ ನೇಮಕಾತಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಲಾಲು ಮತ್ತು ಅವರ ಕುಟುಂಬಕ್ಕೆ ವರ್ಗಾವಣೆಯಾದ ಭೂಮಿಗೆ ಬದಲಾಗಿ ರೈಲ್ವೆಯಲ್ಲಿ ಯುವಕರನ್ನು ನೇಮಿಸಿಕೊಂಡಿದ್ದಾರೆ ಎಂಬ ಆರೋಪವಿದೆ.
ಪ್ರತಿಕ್ರಿಯಿಸಿದ ನೆಟಿಜನ್ಸ್: ಈ ಮಧ್ಯೆ, ಲಾಲು ಮತ್ತು ಕುಟುಂಬಕ್ಕೆ ಇಡಿ ಮತ್ತು ಸಿಬಿಐ ಸಮನ್ಸ್‌ಗೆ ಬಿಹಾರ ಮುಖ್ಯಮಂತ್ರಿಯ ಅಸ್ಪಷ್ಟ ಉತ್ತರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಮೆಂಟ್ಗಳು ಬರುತ್ತಿವೆ. ಮಾಜಿ ಮಿತ್ರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ. ನಿತೀಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ನೆಟಿಜನ್ಸ್, "ಅತಿಶೀಘ್ರದಲ್ಲೇ ನಿತೀಶ್ ಚಾಚಾ ಆರ್‌ಜೆಡಿ ಮೈತ್ರಿ ಮುರಿದು ಬಿಜೆಪಿಯೊಂದಿಗೆ ಕೈಜೋಡಿಸಲಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.
ಹೌಸ್ ಫುಲ್ ಸರ್ಕಸ್ ಶೋ: "ನಿತೀಶ್ ಸಾಹೇಬ್ ಅವರು ಕೇಜ್ರಿವಾಲ್ ಗುರುವಾಗಿದ್ದಾರೆ, ಬಿಹಾರದಲ್ಲಿ ಭರ್ಜರಿ ಹೌಸ್ ಫುಲ್ ಸರ್ಕಸ್ ಶೋ ನಡೆಯುತ್ತಿದೆ" ಎಂದು ಮತ್ತೊಬ್ಬ ನೆಟಿಜನ್, ಬಿಹಾರದ ರಾಜಕೀಯ ನಾಟಕವನ್ನು ಉಲ್ಲೇಖಿಸಿ ಬರೆದಿದ್ದಾರೆ. ಕುಮಾರ್ ಅವರು ಮೈತ್ರಿ ಮಾಡಿಕೊಳ್ಳುವುದು ಮತ್ತು ಒಡೆಯುವುದು ಹೊಸದಲ್ಲ. ಅವರು ಬೇರ್ಪಡುವ ಮೊದಲು ಕಳೆದ ವರ್ಷ ಬಿಜೆಪಿ, 2017 ರಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ಅಕ್ರಮ ಟೆಂಡರ್‌ಗಳ ಆರೋಪದ ಮೇಲೆ ಸಿಬಿಐ ದಾಳಿ ನಡೆಸಿದ ನಂತರ ಆರ್‌ಜೆಡಿ ಜೊತೆಗಿನ ಮೈತ್ರಿಯನ್ನ ಜೆಡಿಯು ಮುರಿದುಕೊಂಡಿತ್ತು.
ಆ ಸಮಯದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದಯ್ ಕೂಡ ಸಿಬಿಐ ಪ್ರಕರಣದ ಹಿನ್ನೆಲೆ ರಾಜೀನಾಮೆ ನೀಡಿದ್ದರು. ದಾಳಿಯ ನಂತರ ಜೆಡಿಯು ತನ್ನ ಮೈತ್ರಿ ಮುರಿದು, ಭಾರತೀಯ ಜನತಾ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಯಾದವ್ ಅವರ ಮೂವರು ಪುತ್ರಿಯರು ಮತ್ತು ಸಂಬಂಧಿಕರ ಮನೆಗಳ ಮೇಲೆ ಇಡಿ ಶುಕ್ರವಾರ 15 ಗಂಟೆಗಳಿಗೂ ಹೆಚ್ಚು ಕಾಲ ದಾಳಿ ನಡೆಸಿದೆ. ಈ ಪ್ರಕರಣದಲ್ಲಿ ಲಾಲು ಅವರ ಆಪ್ತ ಸಹಾಯಕ ಅಬು ದೋಜಾನಾ ಅವರ ಮನೆ ಮೇಲೂ ಇಡಿ ದಾಳಿ ನಡೆಸಿತ್ತು. ಲಾಲು ಯಾದವ್ ಅವರ ಪತ್ನಿ ರಾಬ್ರಿ ದೇವಿಯನ್ನು ಅವರ ನಿವಾಸದಲ್ಲಿ ವಿಚಾರಣೆ ನಡೆಸಿದ ಒಂದು ದಿನದ ನಂತರ, ಸಿಬಿಐ ಕೂಡ ಲಾಲು ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಇದನ್ನೂ ಓದಿ: ಎನ್‌ಸಿಪಿ ನಾಯಕ ಹಸನ್ ಮುಶ್ರಿಫ್ ಮನೆ ಮೇಲೆ ಇಡಿ ದಾಳಿ, ಕಾರ್ಯಕರ್ತರ ಪ್ರತಿಭಟನೆ