ರಾಣಿಬಂಧ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಒಂದು ವಾರ ಬಾಕಿ ಉಳಿದಿದ್ದು, ತೃಣಮೂಲ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷಗಳು ಅಬ್ಬರದ ಮತ ಪ್ರಚಾರ ನಡೆಸುತ್ತಿವೆ. ಜತೆಗೆ ಆರೋಪ-ಪ್ರತ್ಯಾರೋಪ ಸರ್ವೇ ಸಾಮಾನ್ಯವಾಗಿವೆ.
ಪಶ್ಚಿಮ ಬಂಗಾಳದ ರಾಣಿಬಂಧ್ ಪ್ರದೇಶದಲ್ಲಿ ಗೃಹ ಸಚಿವ ಅಮಿತ್ ಶಾ ಬಿಜೆಪಿ ಪರ ಕ್ಯಾಂಪೇನ್ ನಡೆಸಿದರು. ಈ ವೇಳೆ ಮಮತಾ ವಿರುದ್ಧ ವಾಗ್ದಾಳಿ ನಡೆಸುತ್ತಾ, ನೀವು ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥನೆ ಮಾಡುವೆ. ಆದರೆ ನಿಮ್ಮ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ ಬಿಜೆಪಿಯ 130 ಕಾರ್ಯಕರ್ತರ ಕೊಲೆಯಾಗಿದೆ. ಇದರ ನೋವು ತುಂಬಲು ನಿಮ್ಮಿಂದ ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ದೀದಿಗೆ ಶಾಕ್ ಮೇಲೆ ಶಾಕ್: ಟಿಎಂಸಿ ಪಕ್ಷಕ್ಕೆ ಮತ್ತೋರ್ವ ನಾಯಕಿ ರಾಜೀನಾಮೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 7ನೇ ವೇತನಾ ಆಯೋಗ ಜಾರಿಗೆ ತರಲಾಗುವುದು ಎಂದು ಅವರು ಭರವಸೆ ನೀಡಿದ್ದು, ಸೋನಾರ್ ಬಾಂಗ್ಲಾ ಆಗುವ ದಿನಗಳು ತುಂಬಾ ದೂರ ಉಳಿದಿಲ್ಲ ಎಂದರು.
ಕಳೆದ ಕೆಲ ದಿನಗಳ ಹಿಂದೆ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಎರಡು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಡಿಸ್ಚಾರ್ಜ್ ಆಗಿದ್ದು, ಇದೀಗ ವ್ಹೀಲ್ ಚೇರ್ ಮೇಲೆ ಪ್ರಚಾರ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಸ್ಪರ್ಧೆ ಉಂಟಾಗಿದೆ.