ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಗುರುವಾರ 8ನೇ ಹಂತದ(ಕೊನೆ ಹಂತ)ಮತದಾನವಾಗಿದ್ದು, 35 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ.76ರಷ್ಟು ಮತದಾನವಾಗಿದೆ. ಈ ಮೂಲಕ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಪಂಚರಾಜ್ಯ ಚುನಾವಣಾ ಮತ ಎಣಿಕೆಗೆ ದಿನಗಣನೇ ಆರಂಭವಾಗಿದೆ.
ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ 8 ಹಂತದಲ್ಲಿ ಚುನಾವಣೆ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಉಳಿದಂತೆ ತಮಿಳುನಾಡಿನ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವೋಟಿಂಗ್ ಆಗಿದ್ದು, ಡಿಎಂಕೆ ಹಾಗೂ ಎಐಎಡಿಎಂಕೆ ನಡುವೆ ಪೈಪೋಟಿ ಇದೆ. ಉಳಿದಂತೆ ಕೇರಳದ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವೋಟಿಂಗ್ ಆಗಿದೆ. ಇಲ್ಲಿ ಯುಡಿಎಫ್ ಹಾಗೂ ಎಲ್ಡಿಎಫ್ ನಡುವೆ ಹಣಾಹಣಿ ಇದೆ.
ಇದರ ಜತೆಗೆ ಅಸ್ಸೋಂ 126 ಕ್ಷೇತ್ರಗಳು ಹಾಗೂ ಪುದುಚೇರಿಯ 30 ಕ್ಷೇತ್ರಗಳಿಗೂ ಮತದಾನವಾಗಿದ್ದು, ಮತದಾರ ಪ್ರಭುಗಳು ಯಾರ ಕಡೆ ವಾಲಿದ್ದಾನೆ ಎಂಬುದಕ್ಕೆ ಭಾನುವಾರ ಉತ್ತರ ಸಿಗಲಿದೆ. ಎಲ್ಲ ರಾಜ್ಯದ ಮತಎಣಿಕೆ ಭಾನುವಾರ ನಡೆಯಲಿದ್ದು, ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಫಲಿತಾಂಶ ಹೊರಬರಲಿದೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗಿದ್ದು, ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಉಳಿದಂತೆ ತಮಿಳುನಾಡಿನಲ್ಲಿ ಡಿಎಂಕೆಗೆ ಬಹುಮತ ನೀಡಲಾಗಿದ್ದು, ಕೇರಳದಲ್ಲಿ ಎಲ್ಡಿಎಫ್ ಮತ್ತೊಂದು ಅವಧಿಗೆ ಅಧಿಕಾರ ರಚನೆ ಮಾಡಲಿದೆ ಎನ್ನಲಾಗಿದೆ. ಅಸ್ಸೋಂನಲ್ಲಿ ಬಿಜೆಪಿ ಹಾಗೂ ಪುದುಚೇರಿಯಲ್ಲಿ ಎನ್ಆರ್ಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆ ನೀಡಲಾಗಿದೆ.