ಹೈದರಾಬಾದ್: ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆಗಳಿಗೆ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಎರಡು ಸುತ್ತುಗಳ ಮತದಾನ ಕಂಡಿರುವ ಅಸ್ಸೋಂ ವಿಧಾನಸಭೆ (ಅಂತಿಮ) ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ 3ನೇ ಹಂತದ ಚುನಾವಣೆಗೆ ಸಜ್ಜಾಗಿದೆ.
ಪಶ್ಚಿಮ ಬಂಗಾಳದಲ್ಲಿ ಇಂದಿನ ಮತದಾನ ಹೊರತುಪಡಿಸಿ ಇನ್ನೂ 5 ಹಂತದ ಮತದಾನ ಬಾಕಿಯಿದೆ. ದೀದಿ ನಾಡಿನ ಚುನಾವಣೆ ಯುದ್ಧಭೂಮಿಗೆ ಹಲವು ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು ಪ್ರವೇಶಿಸಿವೆ. ಈ ಪೈಕಿ ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳು ವಿಜಯ ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಎಲೆಕ್ಷನ್ ಎಂಬ ಚದುರಂಗದಾಟ ಇಲ್ಲಿ ಹೈವೋಲ್ಟೇಜ್‌ನಿಂದ ಕೂಡಿದೆ.
ಇಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮೂರನೇ ಹಂತದಲ್ಲಿ ಐದು ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ 31 ಕ್ಷೇತ್ರಗಳಿಗೆ ಒಟ್ಟು 205 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 193 ಪುರುಷರು ಮತ್ತು 12 ಮಹಿಳಾ ಸ್ಪರ್ಧಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
50ರಷ್ಟು (102) ಅಭ್ಯರ್ಥಿಗಳು 12ನೇ ತರಗತಿಯ ಅತ್ಯಧಿಕ ಶಿಕ್ಷಣದ ಅರ್ಹತೆ ಹೊಂದಿದ್ದಾರೆ. ರಾಜಕೀಯ ಪಕ್ಷಗಳು ಮೂರನೇ ಹಂತದ ಮತದಾನದಲ್ಲಿ ಕ್ರಿಮಿನಲ್ ಪ್ರಕರಣ ಹೊಂದಿರುವ ಸುಮಾರು ಶೇ 26ರಷ್ಟು ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಎಲ್ಲಾ ಪ್ರಮುಖ ಪಕ್ಷಗಳು ಕ್ರಿಮಿನಲ್ ಪ್ರಕರಣಗಳೊಂದಿಗೆ ಶೇ 11ರಿಂದ ಶೇ 62ರಷ್ಟು ಅಭ್ಯರ್ಥಿಗಳವರೆಗೆ ಟಿಕೆಟ್ ನೀಡಿವೆ.
31 ಕ್ಷೇತ್ರಗಳಲ್ಲಿ ಎಂಟು (ಶೇ 26ರಷ್ಟು) ಸೂಕ್ಷ್ಮ ಕ್ಷೇತ್ರಗಳೆಂದು ಘೋಷಿಸಲಾಗಿದೆ. ಇದರಲ್ಲಿ ಮೂರು ಅಥವಾ ಹೆಚ್ಚಿನ ಸ್ಪರ್ಧಾಳುಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಹಿಂಸಾಚಾರ ರಹಿತ ಚುನಾವಣೆಯ ನಡೆಸಲು ಮತ್ತು ಮತದಾರರ ವಿಶ್ವಾಸ ಹೆಚ್ಚಿಸಲು ಸಿಎಪಿಎಫ್‌ನ 125ಕ್ಕೂ ಹೆಚ್ಚು ಭದ್ರತಾ ಪಡೆಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ.
ಏಪ್ರಿಲ್ 1ರಂದು 30 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಮತದಾನದಲ್ಲಿ ಬಂಗಾಳ ಶೇ 80ರಷ್ಟು ಮತದಾನ ಕಂಡಿದೆ. ಮಾರ್ಚ್ 27ರಂದು ನಡೆದ 30 ವಿಧಾನಸಭಾ ಕ್ಷೇತ್ರಗಳ ಮೊದಲ ಹಂತದ ಚುನಾವಣೆಯಲ್ಲಿ ಶೇ 79.79ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆಗೆ ಎಂಟು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29 ಚುನಾವಣೆ ನಿಗದಿಯಾಗಿದೆ.ಕಳೆದ ಬಾರಿ 7 ಹಂತಗಳಲ್ಲಿ ಚುನಾವಣೆ ನಡೆದಿತ್ತು.
ಈ ಬಾರಿ 294 ಅಭ್ಯರ್ಥಿಗಳ ಭವಿಷ್ಯ ಮೇ 2ರಂದು ನಿರ್ಧಾರವಾಗಲಿದೆ.