ಬರಸತ್(ಪಶ್ಚಿಮ ಬಂಗಾಳ): ಮುಂದಿನ 24 ಗಂಟೆಗಳ ಕಾಲ ಪ್ರಚಾರ ನಿಷೇಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದ್ದರ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿ ನಡೆಸಿದರು.
ಕೋಲ್ಕತ್ತಾದ ಹೃದಯ ಭಾಗ ಬರಸತ್ನಲ್ಲಿ ವ್ಹೀಲ್ ಚೇರ್ನಲ್ಲೇ ಕುಳಿತುಕೊಂಡು ಪ್ರತಿಭಟನೆ ನಡೆಸಿದ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಕೃಷ್ಣ ನಗರದಲ್ಲಿ ನಡೆದ ಸಭೆಯಲ್ಲಿ ಮಮತಾ ದೀದಿ ಮಾಟುವಾ ಸಮುದಾಯಕ್ಕೆ ಏನೂ ಮಾಡಲಿಲ್ಲ ಎಂದು ಹೇಳಿದರು. ನಾನು ಅವರಿಗೆ ಸವಾಲು ಹಾಕಿ, ಸಾರ್ವಜನಿಕವಾಗಿ ಕೇಳುತ್ತಿದ್ದೇನೆ. ನಾನು ಮಾಟುವಾ ಸಮುದಾಯಕ್ಕೆ ಏನೂ ಮಾಡದಿದ್ದರೆ ರಾಜಕೀಯ ಬಿಡಲು ಸಿದ್ಧ. ನೀವು ಸುಳ್ಳು ಹೇಳುತ್ತಿದ್ದರೆ ಕಿವಿ ಹಿಡಿದುಕೊಂಡು ಸಿಟ್ ಅಪ್ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಬಳಿ ಹಣವಿದೆ, ಹೋಟೆಲ್ಗಳಿವೆ ಮತ್ತು ಎಲ್ಲ ಏಜೆನ್ಸಿಗಳು ನಿಮ್ಮ ಜೊತೆಗಿವೆ. ಈಗಲೂ ನೀವು ಪಶ್ಚಿಮ ಬಂಗಾಳದಲ್ಲಿ ಸೋಲು ಕಾಣುತ್ತೀರಿ. ಏಕೆಂದರೆ ನಾನು ಹೋರಾಟಗಾರ್ತಿ. ಯುದ್ಧ ಭೂಮಿಯಿಂದ ಹೋರಾಡುತ್ತೇನೆ ಎಂದಿದ್ದಾರೆ. ಪಶ್ಚಿಮ ಬಂಗಾಳ ಯಾವುದೇ ಕಾರಣಕ್ಕೂ ಗುಜರಾತ್ ಆಗಲು ಬಿಡುವುದಿಲ್ಲ. ನನ್ನನ್ನು ತಡೆಯುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿಲ್ಲ ಲಾಕ್ಡೌನ್: ನಾಳೆಯಿಂದ ರಾಜ್ಯಾದ್ಯಂತ ಸೆಕ್ಷನ್ 144 ಜಾರಿ!
ಚುನಾವಣೆಯಲ್ಲಿ ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಿದ್ದು ಹಾಗೂ ಕೇಂದ್ರ ಪಡೆಗಳ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿತ್ತು. ಇದಾದ ಬೆನ್ನಲ್ಲೇ 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ನಿಷೇಧ ವಿಧಿಸಿತ್ತು.