ಕೋಲ್ಕತ್ತಾ: ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭೆ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ ನಡೆದಿದ್ದು, ಇಂದು ಪಶ್ಚಿಮ ಮೇದಿನಿಪುರ, ಪೂರ್ವ ಮೇದಿನಿಪುರ, ಬಂಕುರಾ, ದಕ್ಷಿಣ 24 ಪರಗಣ ಜಿಲ್ಲೆಗಳ ಒಟ್ಟು 30 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದೆ.
ಇಂದಿನ 2ನೇ ಹಂತದ ಬಂಗಾಳ ಚುನಾವಣೆಯ ಪ್ರಮುಖ ಅಂಶಗಳು ಹೀಗಿವೆ:
- ಹೈ ವೋಲ್ಟೇಜ್ ಕ್ಷೇತ್ರವಾಗಿರುವ 'ನಂದಿಗ್ರಾಮ'ದಲ್ಲೂ ಇಂದು ಮತದಾನ ನಡೆಯುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಟಿಎಂಸಿಗೆ ಕೈಕೊಟ್ಟು ಬಿಜೆಪಿ ಸೇರ್ಪಡೆಗೊಂಡಿದ್ದ ಸುವೆಂದು ಅಧಿಕಾರಿ ನಂದಿಗ್ರಾಮದಿಂದ ಸ್ಪರ್ಧಿಸುತ್ತಿದ್ದಾರೆ. ನಂದಿಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಜನರು ಶೇ.30 ರಷ್ಟಿದ್ದಾರೆ.
- ಕೇಶಪುರದಲ್ಲಿ ಬಿಜೆಪಿ ಅಭ್ಯರ್ಥಿ ತನ್ಮಯ್ ಘೋಷ್ ಅವರ ಕಾರಿಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದು, ಮತಗಟ್ಟೆ ಏಜೆಂಟ್ ಅನ್ನು ಥಳಿಸಲಾಗಿತ್ತು. ಟಿಎಂಸಿ ಗೂಂಡಾಗಳು ಕೃತ್ಯ ಎಸಗಿದೆ ಎಂದು ಬಿಜೆಪಿ ಆರೋಪಿಸಿದೆ. ಘಟನೆ ಬಳಿಕ ಕೇಶಪುರದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: ನಂದಿಗ್ರಾಮ: ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ
- ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಇವಿಎಂ ಅನ್ನು ನಿಯಂತ್ರಿಸಲು ವೋಟಿಂಗ್ ಬೂತ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಟಿಎಂಸಿ ಸಂಸದ ಡೆರೆಕ್ ಒ'ಬ್ರಿಯೆನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
- ನಂದಿಗ್ರಾಮದಲ್ಲಿ ಇಂದು ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿದ್ದರೆ, ಕೇಶಪುರದಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬನ ಕೊಲೆಯಾಗಿದೆ.
- ಸಿಎಂ ಮಮತಾ ಬ್ಯಾನರ್ಜಿ ಅವರು ನಾಮಪತ್ರ ಸಲ್ಲಿಸಿದ ದಿನವೇ ನಂದಿಗ್ರಾಮದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದ ಬಳಿಕ ವ್ಹೀಲ್ಚೇರ್ನಲ್ಲಿ ಕುಳಿತೇ ರೋಡ್ ಶೋ, ಪ್ರಚಾರ ನಡೆಸುತ್ತಿದ್ದಾರೆ. ಇಂದು ಕೂಡ ಗಾಲಿಕುರ್ಚಿಯಲ್ಲಿ ಕುಳಿತು ನಂದಿಗ್ರಾಮದ ವಿವಿಧ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: 3 ಗಂಟೆಯವರೆಗೆ ಬಂಗಾಳದಲ್ಲಿ ಶೇ.71.07, ಅಸ್ಸೋಂನಲ್ಲಿ ಶೇ.63.03ರಷ್ಟು ಮತದಾನ
- ಬೆಳಗ್ಗೆ 7ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಂಗಾಳದಲ್ಲಿ ಶೇ.71.07ರಷ್ಟು ಮತದಾನವಾಗಿದೆ.
- ರಾಜ್ಯದಲ್ಲಿ 10,620 ಬೂತ್‌ಗಳನ್ನು 'ಸೂಕ್ಷ್ಮ' ಮತಗಟ್ಟೆಗಳೆಂದು ಚುನಾವಣಾ ಆಯೋಗ ಘೋಷಿಸಿದ್ದು, ಒಟ್ಟು 651 ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯನ್ನು ನಿಯೋಜಿಸಿದೆ. ಜಿದ್ದಾಜಿದ್ದಿ ಕ್ಷೇತ್ರವಾಗಿರುವ ನಂದಿಗ್ರಾಮಕ್ಕೆ 22 ಸಿಆರ್ಪಿಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ.
- ಮತಗಟ್ಟೆಗಳ ಮೇಲೆ ಕಣ್ಣಿಡಲು ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ.